ಜೇವರ್ಗಿ: ಪಟ್ಟಣದ ಬಸವೇಶ್ವರ ಸರ್ಕಲ್ ಹತ್ತಿರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ 50ಕ್ಕೂ ಹೆಚ್ಚು ಗಿಡ ಮರಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗುತ್ತಿದ್ದು, ಸಂಬಂಧಿಸಿದವರು ರಕ್ಷಣೆಗೆ ಮುಂದಾಗುತ್ತಿಲ್ಲ.
ಕಳೆದ ಮೂರು ವರ್ಷದ ಹಿಂದೆ ಉಪ ವಲಯ ಅರಣ್ಯ ಅಧಿಕಾರಿ ಸಿದ್ಧುಗೌಡ ಮುತುವರ್ಜಿ ವಹಿಸಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 50ಕ್ಕೂ ಹೆಚ್ಚು ಹೊಂಗೆ, ಬೇವಿನ ಮರಗಳನ್ನು ನೆಡಲು ಕ್ರಮ ಕೈಗೊಂಡಿದ್ದರು. ಅಲ್ಲದೇ ಇಲಾಖೆ ವತಿಯಿಂದ ಎರಡು ವರ್ಷ ಈ ಗಿಡಗಳಿಗೆ ನೀರು ಹಾಕುವ ಮೂಲಕ ಪೋಷಣೆಯನ್ನು ಮಾಡಲಾಗಿತ್ತು.
ಪ್ರಸಕ್ತ ವರ್ಷ ಕೆಂಡದಂತ ಬಿಸಿಲಿನ ತಾಪಕ್ಕೆ ಎಲ್ಲ ಗಿಡಗಳು ಒಣಗಿ ಎಲೆಗಳು ಉದುರಿ, ಕೇವಲ ಟೊಂಗೆಗಳೇ ಕಾಣುತ್ತಿವೆ. ಇವುಗಳ ರಕ್ಷಣೆಗೆ ಕಾಲೇಜಿನ ಆಡಳಿತ ಮಂಡಳಿ, ಪುರಸಭೆ ಗಮನಹರಿಸಿಲ್ಲ. ಪಟ್ಟಣದ ಮಧ್ಯಭಾಗದಲ್ಲಿ ಬರುವ ಈ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಬೆಳಗ್ಗೆ ಹಾಗೂ ಸಂಜೆ ವಾಯುವಿಹಾರಕ್ಕಾಗಿ ಸಾರ್ವಜನಿಕರು, ವೃದ್ಧರು ಆಗಮಿಸುತ್ತಾರೆ. ಇಲ್ಲಿರುವ ಚಿಕ್ಕ ಗಿಡಮರಗಳು ತಕ್ಕ ಮಟ್ಟಿಗೆ ನೆರಳು ನೀಡುತ್ತಿದ್ದವು. ಆದರೆ ಕೆಲ ದಿನಗಳಿಂದ ಈ ಗಿಡಗಳಿಗೆ ನೀರಿಲ್ಲದ ಕಾರಣ ಬೇಸಿಗೆ ತಾಪಮಾನದಿಂದ ಒಣಗಿ ಹೋಗುತ್ತಿವೆ.
ಪರಿಸರ ದಿನಕ್ಕಷ್ಟೇ ಸೀಮಿತರಾಗಬೇಡಿ
ಕೇವಲ ಜೂ.5ರಂದು ಪರಿಸರ ದಿನ ಆಚರಣೆ ಮಾಡಿದರೇ ಸಾಲದು. ಪರಂಪರಾಗತವಾಗಿ ಬಂದ ಸಂಪತ್ತು ಪರಿಸರ ಉಳಿಸಿ ಮುಂದಿನ ತಲೆಮಾರಿಗೆ ಉಡುಗೊರೆ ಕೊಡಬೇಕು. ಯುವಕರು ಸೇರಿದಂತೆ ಪ್ರತಿಯೊಬ್ಬರೂ ಗಿಡ ನೆಡುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು. ಮನೆಗೊಂದು ಮರ, ಊರಿಗೊಂದು ವನದಂತೆ ಮರಗಿಡ ಬೆಳೆಸಬೇಕು. ಕಾಲೇಜಿನ ಆವರಣದಲ್ಲಿರುವ ಗಿಡಮರಗಳ ರಕ್ಷಣೆಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿ ಸದಾನಂದ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಲೇಜಿನ ಆವರಣದಲ್ಲಿರುವ ಬೋರವೆಲ್ ಇಂಜಿನ್‌ನ್ನು ಕಿಡಿಗೇಡಿಗಳು ಕಿತ್ತುಕೊಂಡು ಹೋಗಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೂ ನೀರಿನ ಸಮಸ್ಯೆಯಾಗಿದೆ. ಆದರೂ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟದಲ್ಲಿರುವ ಬೋರವೆಲ್ ಮೂಲಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಜತೆ ಸೇರಿ ಗಿಡಮರಗಳ ರಕ್ಷಣೆ ಮಾಡಲಾಗುವುದು.
-ಅಲ್ಲಾವುದ್ದೀನ್ ಸಾಗರ, ಪ್ರಾಚಾರ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜು
ಅರಣ್ಯ ಇಲಾಖೆಯಿಂದ ಕಳೆದು ಎರಡು ವರ್ಷಗಳ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು, ಎರಡು ವರ್ಷ ನಿರ್ವಹಣೆ ಮಾಡಲಾಗಿತ್ತು. ಆದರೆ ಪ್ರಸಕ್ತ ವರ್ಷ ನಿರ್ವಹಣೆಗೆ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.
-ಸಿದ್ಧುಗೌಡ, ಉಪ ವಲಯ ಅರಣ್ಯಾಧಿಕಾರಿ
-ವಿಜಯಕುಮಾರ ಎಸ್.ಕಲ್ಲಾ