ಮೈಸೂರು: ಜೂನ್ 21ರಂದು ನಡೆಯಲಿರುವ ಐದನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾನುವಾರ ಮುಂಜಾನೆ ಸಾವಿರಾರು ಮಂದಿ ಪೂರ್ವಭ್ಯಾಸ ನಡೆಸಿದರು.
ಪ್ರತಿ ವರ್ಷದಂತೆ ಈ ಸಲವೂ ಮೈಸೂರು ರೇಸ್ ಕೋರ್ಸ್‌ನಲ್ಲಿ ಯೋಗ ತಾಲೀಮು ನಡೆಯಿತು. ಕಾರ್ಯಕ್ರಮಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ದೀಪ ಬೆಳಗಿ ಚಾಲನೆ ನೀಡಿದರೆ, ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಶಾಸಕ ಎಸ್.ಎ. ರಾಮದಾಸ್ ಸಾಥ್ ನೀಡಿದರು.
ಹಳದಿ, ಬಿಳಿ ವಸ್ತ್ರ ವಿತರಣೆ: ಬೆಳಗ್ಗೆಯೇ ಯೋಗ ಮ್ಯಾಟ್, ಜಮಾಖಾನಗಳ ಸಮೇತ ಸ್ಥಳಕ್ಕೆ ಆಗಮಿಸಿದ್ದ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿದರು. ಈ ಸಂದರ್ಭ ಅಂತಾರಾಷ್ಟ್ರೀಯ ಯೋಗಪಟು ಕು. ಖುಷಿ ಯೋಗಾಭ್ಯಾಸವನ್ನು ಹೇಳಿಕೊಟ್ಟರು. ಇತರೆ ಯೋಗ ಗುರುಗಳು ಕೈಜೋಡಿಸಿ ಯೋಗಪಟುಗಳನ್ನ ಹುರಿದುಂಬಿಸಿದರು. ಬಂದವರಿಗೆ ಹಳದಿ ಮತ್ತು ಬಿಳಿ ವಸ್ತ್ರವನ್ನು ನೀಡಲಾಯಿತು.
ಯೋಗ ಗುರುಗಳ ಮಾರ್ಗದರ್ಶನ: ಯೋಗಪಟುಗಳು ಸೂರ್ಯ ನಮಸ್ಕಾರ, ತ್ರಿಕೋನಾಸನ, ಪಾರ್ಶ್ವಕೋನಾಸನ, ಪೂರ್ವೋತ್ತಾನಾಸನ, ಪಶ್ಚಿಮೋತ್ತಾನಾಸನ, ಶಲಭಾಸನ, ಭುಜಂಗಾಸನ, ಮಕರಾಸನ, ಮೌನಾಸನ, ಶವಾಸನ ಸೇರಿದಂತೆ ಮತ್ತಿರ ಆಸನಗಳನ್ನು ಯೋಗ ಗುರುಗಳ ಮಾರ್ಗದರ್ಶನದಲ್ಲಿ ಪ್ರದರ್ಶಿಸಿದರು. ಯೋಗ ಗುರುಗಳ ಮಾರ್ಗದರ್ಶನ ಪಾಲಿಸಲು ಧ್ವನಿವರ್ಧಕದ ಅಳವಡಿಸಲಾಗಿತ್ತು.
ಈ ವೇಳೆ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಯೋಗ ಗುರು ಶ್ರೀಹರಿ, ರವೀಂದ್ರಸ್ವಾಮಿ, ಬಿ.ಎಸ್. ಪ್ರಶಾಂತ್, ಡಿ. ರವಿಕುಮಾರ್ ಸೇರಿದಂತೆ ಯೋಗಾಸಕ್ತರು, ವಿದ್ಯಾರ್ಥಿಗಳು, ಯೋಗಬಂಧುಗಳು, ಸಾರ್ವಜನಿಕರು, ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ನೌಕರರು ಪಾಲ್ಗೊಂಡಿದ್ದರು.
ರಾಜೀನಾಮೆ ಅಂಗೀಕಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆ: ಎಚ್. ವಿಶ್ವನಾಥ್ ಅವರ ರಾಜೀನಾಮೆ ಅಂಗೀಕಾರವಾದ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ಜೆಡಿಎಸ್ ಘಟಕಕ್ಕೆ ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿ ಬಂದಿದೆಯೇ ಹೊರತು, ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಅವರ ಹೆಸರು ಇಲ್ಲ. ಈಗ ವಿಶ್ವನಾಥ್ ಅವರು ನೀಡಿರುವ ರಾಜೀನಾಮೆಯೇ ಅಂಗೀಕರವಾಗಿಲ್ಲ.
ಅದು ಅಂಗೀಕಾರಗೊಂಡ ಮೇಲೆ ಬದಲಾವಣೆ ಕುರಿತು ಚರ್ಚಿಸಲಾಗುವುದು. ಅಲ್ಲಿಯವರೆಗೂ ಬದಲಾವಣೆ ಕುರಿತು ಮಾತೇ ಇಲ್ಲ. ಯುವ ಘಟಕಕ್ಕೆ ನಿಖಿಲ್ ಹೆಸರು ಪ್ರಸ್ತಾಪವಾಗಿರುವುದರಿಂದ ಈ ಕುರಿತು ಚರ್ಚಿಸಬೇಕಿದೆ ಎಂದು ತಿಳಿಸಿದರು.