Advertisement

25 ವರ್ಷಗಳಲ್ಲಿ 4ಕ್ಕೂ ಅಧಿಕ ಇಸ್ಲಾಂ ಸಂಘಟನೆ ನಿಷೇಧ

10:32 PM Sep 29, 2022 | Team Udayavani |

ಬೆಂಗಳೂರು: ಕಳೆದ 25 ವರ್ಷಗಳಿಂದ ದೇಶದಲ್ಲಿ ಇಸ್ಲಾಂನ ಬಲಿಷ್ಠ ಸಂಘಟನೆಗಳ 4ಕ್ಕೂ ಅಧಿಕ ಸಂಘಟನೆಗಳು ನಿಷೇಧಕ್ಕೊಳಪಟ್ಟಿದೆ.

Advertisement

ಸಿಮಿ, ಎನ್‌ಡಿಎಫ್, ಇಸ್ಲಾಮಿಕ್‌ ಸೇವಕ್‌ ಸಂಘ, ಪಿಎಫ್ಐ ಇವುಗಳಲ್ಲಿ ಪ್ರಮುಖವಾದವು. ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದಲ್ಲಿ 2001ರಲ್ಲಿ ನಿಷೇಧಕ್ಕೊಳಪಟ್ಟ ಸ್ಟೂಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್ ಇಂಡಿಯಾ (ಸಿಮಿ)  ಹೊಂದಿದ್ದ ಆಶಯವನ್ನೇ ಪಿಎಫ್ಐ ಕೂಡ  ಮುಂದುವರಿಸಿಕೊಂಡು ಹೋಗಿರುವುದಕ್ಕೆ ಸಾಕ್ಷ್ಯ ಸಿಕ್ಕಿದ ಬಳಿಕವೇ ಈ ಸಂಘಟನೆಯನ್ನೂ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

2006ರಲ್ಲಿ ಪಿಎಫ್ಐಯ ರಾಜಕೀಯ ವಿಭಾಗ ಎಸ್‌ಡಿಪಿಐ ಕರ್ನಾಟಕದಲ್ಲಿ ಫೋರಂ ಫಾರ್‌ ಡಿಗ್ನಿಟಿ  (ಕೆಎಫ್ಡಿ), ಕೇರಳದಲ್ಲಿ ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್‌ (ಎನ್‌ಡಿಎಫ್) ಮತ್ತು ತಮಿಳುನಾಡಿನಲ್ಲಿ ಮನಿತಾ ನೀತಿ ಪಸರೈ (ಎಂಎನ್‌ಪಿ) ಎಂದು ಮೂರು ವಿಭಾಗಗಳಾಗಿ ವಿಂಗಡನೆಗೊಂಡಿತ್ತು.

ಬಾಬರಿ ಮಸೀದಿ ಧ್ವಂಸದ ಬಳಿಕ  1992ರಲ್ಲಿ ಇಸ್ಲಾಮಿಕ್‌ ಸೇವಕ್‌ ಸಂಘ ನಿಷೇಧಕ್ಕೊಳಪಟ್ಟ ಬಳಿಕ ಎನ್‌ಡಿಎಫ್ ಮಲಬಾರ್‌ ಪ್ರದೇಶದಲ್ಲಿ ದೃಢವಾದ ನೆಲೆ ಪಡೆದುಕೊಂಡಿತ್ತು. ಕೇರಳದ ಮುಸ್ಲಿಮರನ್ನು ಕೇಂದ್ರೀಕರಿಸಿ ಅಲ್ಪಸಂಖ್ಯಾಕರ ಕಲ್ಯಾಣಕ್ಕಾಗಿ ಕೆಲಸ ಮಾಡಲೆಂದು ಹುಟ್ಟಿಕೊಂಡಿದ್ದ ಎನ್‌ಡಿಎಫ್ ಅನ್ನು 1994ರಲ್ಲಿ ನಿಷೇಧಿಸಿದ ಬಳಿಕ ಪಿಎಫ್ಐ ಸಂಘಟನೆ ಇದರ ಸ್ಥಾನ ತುಂಬಿತ್ತು.

1977ರಲ್ಲಿ ಸಿಮಿ ಸ್ಥಾಪನೆ:

Advertisement

ಉತ್ತರ ಪ್ರದೇಶದ ಅಲಿಘಡ ಮುಸ್ಲಿಂ ಯೂನಿವರ್ಸಿಟಿಯಲ್ಲಿ 1977ರಲ್ಲಿ ಇ ಅಬೂಬಕ್ಕರ್‌ ಹಾಗೂ ಪ್ರೊ| ಕೋಯಾ ನೇತೃತ್ವದಲ್ಲಿ ಸಿಮಿ ಸಂಘಟನೆ ಆರಂಭಗೊಂಡಿತ್ತು. 1990ರ ದಶಕದಲ್ಲಿ ಅದು ಇಸ್ಲಾಂ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿತ್ತು. 1941ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಜಮಾತ್‌- ಇ -ಇಸ್ಲಾಮಿ ಹಿಂದ್‌ (ಜೆಐಎಚ್‌) ಸಂಘಟನೆಯ ವಿದ್ಯಾರ್ಥಿ ವಿಭಾಗವಾಗಿ ಸಿಮಿ ಸ್ಥಾಪಿಸಲ್ಪಟ್ಟಿದೆ ಎನ್ನುತ್ತಾರೆ ಇಸ್ಲಾಂ ಮುಖಂಡರು.

2019ರಲ್ಲಿ ಸಿಮಿ ನಿಷೇಧವನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಯಿತು. 2011ರ ಭಯೋತ್ಪಾದನೆ ದಾಳಿ ನಡೆಸಿದ ಬಳಿಕ ಸಿಮಿ  ತಣ್ಣಗಾಗಿತ್ತು. ಸಾಮಾಜಿಕ ಸೇವೆ ಹೆಸರಿನಲ್ಲಿ ಹುಟ್ಟಿಕೊಳ್ಳುತ್ತಿರುವ ಈ ಸಂಘಟನೆಗಳು ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ಆರೋಪ ಕೇಳಿ ಬಂದ ಕಾರಣ ದೇಶದಲ್ಲಿ ಇಂತಹ ಸಂಘಟನೆ ನಿಷೇಧಿಸಲಾಗಿದೆ. ಕೆಜಿ ಹಳ್ಳಿ ಗಲಭೆ, ಆರೆಸ್ಸೆಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ ಪ್ರಕರಣ ಸಹಿತ ಹಿಂಸಾತ್ಮಕ ಪ್ರತಿಭಟನೆಗಳು ನಡೆದಾಗಲೆಲ್ಲ ಪಿಎಫ್ಐ ಸಂಘಟನೆ ಸುದ್ದಿಯಲ್ಲಿತ್ತು. ರಾಜ್ಯದ ಕರಾವಳಿ ಪ್ರದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು.

ಪಿಎಫ್ಐ ಕೆಲಸ ಎಸ್‌ಡಿಪಿಐ ಹೆಗಲಿಗೆ? :

2009 ಜೂನ್‌ 21ರಂದು ದಿಲ್ಲಿಯಲ್ಲಿ ಪ್ರಾರಂಭವಾದ ಎಸ್‌ಡಿಪಿಐ ವಿವಾದಾತ್ಮಕ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ (ಪಿಎಫ್ಐ) ರಾಜಕೀಯ ವಿಭಾಗವಾಗಿದೆ. 2010ರ ಎ.13 ರಂದು ಎಸ್‌ಡಿಪಿಐ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟಿತು. ಎಸ್‌ಡಿಪಿಐ ಕೇಡರ್‌ ಆಧಾರಿತ ಪಕ್ಷವಾಗಿದ್ದು, ಸಾಮಾಜಿಕ,  ರಾಜಕೀಯ ಸವಾಲುಗಳನ್ನು ಎದುರಿಸಲು, ನಾಯಕತ್ವವನ್ನು ತೆಗೆದುಕೊಳ್ಳಲು ತಳಮಟ್ಟದಿಂದ ಸದಸ್ಯರನ್ನು ಸಿದ್ಧಪಡಿಸಿತ್ತು. ಅನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾರಂಭಿಸಿತು. ಇದು ಕರ್ನಾಟಕ ಮತ್ತು ಕೇರಳದಲ್ಲಿ ಹೆಚ್ಚು ಸಕ್ರಿಯವಾಗಿತ್ತು. ಪಿಎಫ್ಐ ನಿರ್ವಹಿಸುತ್ತಿದ್ದ ಸಾಮಾಜಿಕ ಕೆಲಸ, ಜವಾಬ್ದಾರಿಗಳು ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಹೆಗಲಿಗೆ ಬೀಳುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next