ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಉಡುಪಿಯಲ್ಲಿ 300 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲಿವೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ನಗರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು
ಉಡುಪಿಗೆ ಮಹಾರಾಷ್ಟ್ರದಿಂದ ಆಗಮಿಸಿರುವ ನಾಗರಿಕರಲ್ಲಿ ಶೇ.9೦ ರಷ್ಡು ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಬಂದಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಮಂಗಳೂರಿಗೆ ಬೇಟಿ ನೀಡಿ ಅಲ್ಲಿನ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಹಲವು ಮಾರ್ಗದರ್ಶನ ನೀಡಲಾಗಿದೆ ಎಂದರು.
ಉಡುಪಿಯಲ್ಲಿ ಕೋವಿಡ್ ಪರೀಕ್ಷೆಗೆ ಯಾವುದೇ ರೀತಿಯಲ್ಲಿ ಪ್ರಯೋಗಾಲಯದ ಕೊರತೆ ಇಲ್ಲ. ದಿನಕ್ಕೆ ಸಾವಿರ ಮಂದಿಗೆ ಪರೀಕ್ಷೆ ನಡೆಸುವಷ್ಡು ಸೌಲಭ್ಯ ಅಲ್ಲಿನ ಕೆಎಂಸಿಯಲ್ಲಿದೆ ಎಂದರು. ಕೋವಿಡ್-19 ವೈರಾಣು ಹೋಗುವುದಿಲ್ಲ. ಅದರೊಂದಿಗೆ ಇದ್ದು ನಾವು ಬದುಕುಬೇಕೆಂದರು.
ರಾಜ್ಯದಲ್ಲಿ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು ಸೋಂಕಿತ ವ್ಯಕ್ತಿಗಳ ಮನೆಗಳನ್ನು ಸೀಲ್ ಡೌನ್ ಮಾಡುವ ಚಿಂತನೆ ಸರ್ಕಾರ ನಡೆಸಿದೆ ಎಂದರು. ರಾಜ್ಯದಲ್ಲಿ ಉಡುಪಿ, ಕಲಬುರುಗಿ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ವಾಗಿದ್ದು ಸದ್ಯದಲೇ ತಾನು ಕಲಬುರುಗಿ ಪ್ರವಾಸ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ತಿಳಿಸಿದರು