ಇಸ್ಲಾಮಾಬಾದ್: ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ 30ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ದಕ್ಷಿಣ ಪಾಕಿಸ್ತಾನದಲ್ಲಿ ಸೋಮವಾರ (ಜೂನ್ 07) ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ:ಕಳೆದ ಎರಡು ತಿಂಗಳ ಬಳಿಕ ದೇಶದಲ್ಲಿ ಭಾರೀ ಇಳಿಕೆ ಕಂಡ ಕೋವಿಡ್ ಪ್ರಕರಣ, 2427 ಸಾವು
ಘಟನೆಯಲ್ಲಿ ಸಾವನ್ನಪ್ಪಿರುವ 30 ಮಂದಿಯ ಶವವನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಗಾಯಗೊಂಡ ಪ್ರಯಾಣಿಕರನ್ನು ಕೂಡಾ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿ ಉಮರ್ ತೌಫೈಲ್ ಸ್ಥಳೀಯ ಜಿಯೋ ನ್ಯೂಸ್ ಚಾನೆಲ್ ಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ದಕ್ಷಿಣ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದ್ದು, ಅಪಘಾತ ಸಂಭವಿಸಿದ ನಂತರ ರಕ್ಷಣಾ ಕಾರ್ಯಾಚರಣೆ ನಡೆಸಲು ವಿಳಂಬವಾಗಿದೆ. ಬೋಗಿಗಳ ನಡುವೆ ಪ್ರಯಾಣಿಕರು ಸಿಲುಕಿರುವುದರಿಂದ ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.
ಬೋಗಿಯೊಂದರಲ್ಲಿ ಸಿಲುಕಿಕೊಂಡಿರುವ ಸುಮಾರು 25 ಮಂದಿ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ಇನ್ನಷ್ಟೇ ನಡೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿ ತಪ್ಪಿದ ಪರಿಣಾಮ ಮತ್ತೊಂದು ಹಳಿಯಲ್ಲಿ ನಿಂತಿದ್ದ ಮಿಲ್ಲಾತ್ ಎಕ್ಸ್ ಪ್ರೆಸ್ ರೈಲಿಗೆ ಸೈಯದ್ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ವರದಿ ವಿವರಿಸಿದೆ.