Advertisement

ಅಬ್ಬರದ ಗಾಳಿಗೆ ಉರುಳಿದ 20ಕ್ಕೂ ಹೆಚ್ಚು ಮರಗಳು

09:31 AM May 27, 2019 | Team Udayavani |

ಬೆಂಗಳೂರು: ನಗರದಲ್ಲಿ ಶನಿವಾರ ಸಂಜೆ ಜೋರಾದ ಗಾಳಿ ಸಹಿತ ಸುರಿದ ಮಳೆಯಿಂದಾಗಿ 20ಕ್ಕೂ ಹೆಚ್ಚಿನ ಬೃಹದಾಕಾರದ ಮರಗಳು ನೆಲಕಚ್ಚಿದ್ದು, ಹತ್ತಾರು ವಾಹನಗಳ ಮೇಲೆ ಮರಗಳು ಉರುಳಿ ಜಖಂಗೊಂಡಿವೆ.

Advertisement

ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಹೊರವಲಯಗಳಲ್ಲಿ ಆರಂಭವಾದ ಮಳೆ 6.30ರ ವೇಳೆಗೆ ಕೇಂದ್ರ ಭಾಗದಲ್ಲಿ ಅಬ್ಬರಿಸಿತು. ಗುಡುಗು-ಸಿಡಿಲು ಹಾಗೂ ಜೋರು ಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ಕೇಂದ್ರ ಭಾಗದ ಬಡಾವಣೆಗಳಲ್ಲಿ ರಸ್ತೆಗೆ ಮರಗಳು ಉರುಳಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ನಗರದಲ್ಲಿ ಮಳೆಯ ರಭಸ ಕಡಿಮೆಯಿದ್ದರೂ, ಗಾಳಿಯ ಆರ್ಭಟ ಜೋರಾಗಿತ್ತು. ಪರಿಣಾಮ ನಗರದ ಹಲವೆಡೆಗಳಲ್ಲಿ ಮರಗಳು ಉರುಳಿದವು.  ಮೆಜೆಸ್ಟಿಕ್‌, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರ, ಶಿವಾನಂದ ವೃತ್ತ, ಬಸವನಗುಡಿ, ಚಾಮರಾಜಪೇಟೆ, ಮಲ್ಲೇಶ್ವರ, ವಿಜಯನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರುನಿಂತು ವಾಹನ ಸವಾರರು ಪರದಾಡುವಂತಾಯಿತು.

ಓಕಳೀಪುರ ಮೇಲ್ಸೇತುವೆ, ವಿಂಡ್ಸರ್‌ ಮ್ಯಾನರ್‌, ಶಿವಾನಂದ ವೃತ್ತದ ರೈಲ್ವೆ ಅಂಡರ್‌ ಪಾಸ್‌, ಕೆ.ಆರ್‌.ವೃತ್ತ, ನಾಯಂಡಹಳ್ಳಿ ಸೇರಿದಂತೆ ಹಲವು ಕಡೆ ರಸ್ತೆಯಲ್ಲಿ ಕೆಲ ಕಾಲ ನೀರು ನಿಂತ ಪರಿಣಾಮ ಸಮಸ್ಯೆ ಉಂಟಾಗಿತ್ತು.

Advertisement

ಬಸವನಗುಡಿ, ಭಾರತಿ ನರ್ಸಿಂಗ್‌ ಹೋಂ, ಐಟಿಸಿ, ರಾಮೊ ಬಡಾವಣೆ, ಡಾಲರ್ ಕಾಲೋನಿ, ವಿಜಯನಗರ, ಡಬಲ್‌ ರಸ್ತೆ, ಸ್ಯಾಂಕಿ ಕೆರೆ ಜಂಕ್ಷನ್‌, ಮಹದೇವಪುರ, ಕೆ.ಆರ್‌.ಪುರ ಸೇರಿದಂತೆ ಹಲವಡೆಗಳಲ್ಲಿ 20ಕ್ಕೂ ಹೆಚ್ಚು ಬೃಹತ್‌ ಮರಗಳು ಉರುಳಿದ್ದು, 30ಕ್ಕೂ ಹೆಚ್ಚಿನ ಕಡೆಗಳಲ್ಲಿ ಕೊಂಬೆಗಳು ಉರುಳಿವೆ.

ಆರ್‌ಜೆ ಶ್ರುತಿ ತಾಯಿಗೆ ಗಾಯ: ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ಉರುಳಿದ ಮರದ ಕೊಂಬೆಯೊಂದು ಖಾಸಗಿ ರೆಡಿಯೋ ಚಾನೆಲ್‌ನ ಆರ್‌ಜೆ ಶ್ರುತಿ ಅವರ ಕಾರಿನ ಮೇಲೆ ಬಿದ್ದ ಪರಿಣಾಮ ಅವರ ತಾಯಿ ಗಾಯಗೊಂಡಿರುವ ಘಟನೆ ನಡೆದಿದೆ.

ಸ್ಯಾಂಕಿ ಕೆರೆ ಬಳಿಯ ಸದಾಶಿವನಗರ ಭಾಷ್ಯಂ ವೃತ್ತದ ಸಿಗ್ನಲ್‌ನಲ್ಲಿ ನಿಂತಿದ್ದಾಗ ಮರದ ಕೊಂಬೆಗಳು ಕಾರಿನ ಗಾಜಿಗೆ ಬಡಿದಿದ್ದು, ಗಾಜು ತಗುಲಿ ಶ್ರುತಿ ಅವರ ತಾಯಿ ಕೈಗೆ ಗಾಯವಾಗಿದೆ ಎಂದು ಸ್ವತಃ ಶ್ರುತಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, ಮಳೆ ಸಂದರ್ಭಗಳಲ್ಲಿ ಸಿಗ್ನಲ್‌ ಅವಧಿ ಕಡಿತಗೊಳಿಸಬೇಕೆಂದು ಕೋರಿದ್ದಾರೆ.

ಚಿತ್ರಗಳು : ಫ‌ಕ್ರುದ್ದೀನ್‌

Advertisement

Udayavani is now on Telegram. Click here to join our channel and stay updated with the latest news.

Next