Advertisement

ರಾಜ್ಯದ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ

12:00 AM Dec 26, 2022 | Team Udayavani |

ಬೆಂಗಳೂರು: ಸರಕಾರದ ವಿವಿಧ 44 ಇಲಾಖೆಗಳಲ್ಲಿ 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿರುವುದು ಹೊಸ ಭರವಸೆ ಮೂಡಿಸಿದೆ.

Advertisement

ಗಮನಾರ್ಹ ವಿಚಾರವೆಂದರೆ ಪ್ರತಿನಿತ್ಯ ಜನರೊಂದಿಗೆ ಹೆಚ್ಚು ಒಡನಾಡಬೇಕಾದ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಕಂದಾಯ, ಗೃಹ ಇಲಾಖೆಗಳಲ್ಲೇ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲವು ತಿಂಗಳಲ್ಲಿ ಒಂದಿಷ್ಟು ನೇಮಕಾತಿ ಪ್ರಕ್ರಿಯೆಗಳು ನಡೆದಿದ್ದರೂ, ಯಾವುದೂ ಅಂತಿಮಗೊಂಡಿಲ್ಲ. ರಾಜ್ಯದ ವಿವಿಧ 44 ಇಲಾಖೆಗಳಲ್ಲಿ 7.70 ಲಕ್ಷ ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 5.11 ಲಕ್ಷ ಹುದ್ದೆಗಳು ಭರ್ತಿ ಆಗಿದ್ದು, 2.58 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.

ಮುಖ್ಯವಾಗಿ ಸರಕಾರದ ವಿವಿಧ ಇಲಾಖೆಗಳಲ್ಲಿ ಸಿ ಮತ್ತು ಡಿ ಗ್ರೂಪ್‌ 82 ಸಾವಿರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಕಳೆದ ಐದು ವರ್ಷಗಳಲ್ಲಿ ನೇಮಕಾತಿ ನಡೆಸಿದ್ದು 20 ಸಾವಿರ ಹುದ್ದೆಗಳಿಗೆ ಮಾತ್ರ. ಕೃಷಿ, ಶಿಕ್ಷಣ, ಆರ್ಥಿಕ, ಎಸ್ಸಿ-ಎಸ್ಟಿ, ಒಬಿಸಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇದ್ದಾವೆ.

ಕೋವಿಡ್‌-19 ಪರಿಣಾಮ ಆರ್ಥಿಕ ಮಿತವ್ಯಯ ಕಾರಣಕ್ಕೆ ಕಳೆದೆರಡು ವರ್ಷಗಳಿಂದ ಬಹುತೇಕ ನೇಮಕಾತಿ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿದ್ದವು. ಇತ್ತೀಚಿಗೆ ನೇಮಕಾತಿ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದರೂ, ತಾಂತ್ರಿಕ ಹಾಗೂ ಕಾನೂನು ವ್ಯಾಜ್ಯಗಳಿಂದಾಗಿ ವಿಳಂಬವಾಗುತ್ತಿವೆ. ಇದರ ನಡುವೆ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆಧ್ಯಾದೇಶ ಅನುಷ್ಠಾನಕ್ಕೆ ತರುವ ಪ್ರಕ್ರಿಯೆ ಚಾಲನೆಯಲ್ಲಿರುವ ಹಿನ್ನೆಲೆಯಲ್ಲಿ ಮೀಸಲಾತಿ ಅನ್ವಯವಾಗುವ ನೇಮಕಾತಿ ಹಾಗೂ ಮುಂಬಡ್ತಿ ನೀಡುವ ಪ್ರಕ್ರಿಯೆಗಳನ್ನು ತಡೆ ಹಿಡಿಯುವಂತೆ ಎಲ್ಲ ಇಲಾಖೆಗಳಿಗೆ ಸರಕಾರ ಸೂಚಿಸಿದೆ.

5 ವರ್ಷಗಳಲ್ಲಿ 20 ಸಾವಿರ ನೇಮಕಾತಿ
ಕರ್ನಾಟಕ ಲೋಕಸೇವಾ ಆಯೋಗ ಒದಗಿಸಿರುವ ಮಾಹಿತಿಯಂತೆ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಳೆದ ಐದು ವರ್ಷಗಳಲ್ಲಿ ಒಟ್ಟು 20,747 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ತ್ವರಿತ ಕ್ರಮಗಳನ್ನು ಕೆಪಿಎಸ್‌ಸಿ ಕೈಗೊಳ್ಳುತ್ತಿದೆ. ಅದರಂತೆ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳು, ಎಸ್‌ಡಿಎ, ಗ್ರೂಪ್‌ ಸಿ, ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್‌, ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.


ನೇಮಕಾತಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸಿ ಕಾಲಮಿತಿಯೊಳಗೆ ಮುಕ್ತಾಯಗೊಳಿಸಲು ಆಯೋಗದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಸೂಚನೆ, ಅರ್ಜಿ ಸಲ್ಲಿಕೆ, ಪರೀಕ್ಷೆ, ಫ‌ಲಿತಾಂಶ, ಸಂದರ್ಶನ, ತಾತ್ಕಾಲಿಕ ಆಯ್ಕೆ ಪಟ್ಟಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟ ಸೇರಿ ಎಲ್ಲ ಹಂತಗಳಲ್ಲೂ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆಗಳನ್ನು ತರಲಾಗುತ್ತಿದೆ.
– ಸುರಳ್ಕರ್‌ ವಿಕಾಸ್‌ ಕಿಶೋರ್‌.
ಕಾರ್ಯದರ್ಶಿ, ಕೆಪಿಎಸ್‌ಸಿ

Advertisement

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next