Advertisement

17 ಸಾವಿರಕ್ಕಿಂತ ಹೆಚ್ಚು ಅನಧಿಕೃತ ಪ್ಲಾಟ್

09:06 AM Jun 12, 2019 | Suhan S |

ಹುಬ್ಬಳ್ಳಿ: ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಸಮೀಕ್ಷೆ ಪ್ರಕಾರ ಅವಳಿ ನಗರದಲ್ಲಿ 1400 ಎಕರೆ ಪ್ರದೇಶದಲ್ಲಿ 17 ಸಾವಿರಕ್ಕೂ ಅಧಿಕ ಅನಧಿಕೃತ ಪ್ಲಾಟ್‌ಗಳಿವೆ. ಜಿಲ್ಲಾಧಿಕಾರಿಗಳು ಅಕ್ರಮ ಲೇಔಟ್‌ಗಳ ಬಗ್ಗೆ ತಕ್ಷಣ ಗಮನ ಹರಿಸಬೇಕು. ಹುಡಾದಲ್ಲಿ ಈ ಹಿಂದಿದ್ದ ಟಾಸ್ಕ್ಫೋರ್ಸ್‌ ಸಮಿತಿ ಸಕ್ರಿಯಗೊಳಿಸಬೇಕು ಎಂದು ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

Advertisement

ಅವಳಿ ನಗರದಲ್ಲಿ ಅಕ್ರಮ ಲೇಔಟ್‌ಗಳ ಹಾವಳಿ ತಡೆಗಟ್ಟುವ ಸಲುವಾಗಿ ಪಾಲಿಕೆ ಆಯುಕ್ತ ಪಿ. ಮಣಿವಣ್ಣನ್‌ ಇದ್ದಾಗ ಹಾಗೂ ನಾನು ಹುಡಾ ಅಧ್ಯಕ್ಷನಾಗಿದ್ದ ವೇಳೆ ಹುಡಾ, ಕಂದಾಯ ಇಲಾಖೆ, ಹೆಸ್ಕಾಂ ಹಾಗೂ ಪಾಲಿಕೆ ಹಿರಿಯ ಅಧಿಕಾರಿಗಳ ನೇತೃತ್ವದ ಟಾಸ್ಕ್ಫೋರ್ಸ್‌ ತಂಡ ರಚಿಸಿದ್ದೆ. ಸಮಿತಿ ನಿಷ್ಕ್ರಿಯವಾಗಿದ್ದು, ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಹೀಗಾಗಿ ಅಕ್ರಮ ಲೇಔಟ್‌ಗಳು ಹುಟ್ಟುಕೊಳ್ಳುತ್ತಿವೆ ಎಂದರು.

ನಗರದಲ್ಲಿ ಕೆಲವರು ಲೇಔಟ್ ಎಂದು ಹೇಳಿ ನಾಲ್ಕು ಕಡೆ ಕಲ್ಲು ನಿಲ್ಲಿಸಿ, ಪ್ಲಾಟ್‌ಗಳನ್ನು ಬಡವರಿಗೆ ಕಡಿಮೆ ದರದಲ್ಲಿ ಹಾಗೂ ಕಂತುಗಳಲ್ಲಿ ಮಾರಾಟ ಮಾಡುವ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ. ಇಂತಹ ಅಕ್ರಮ ಜಾಗ ಖರೀದಿಸಿದವರು ನಂತರ ಅಲ್ಲಿ ಮನೆ ಕಟ್ಟಿಸಿ ವಾಸಿಸುತ್ತಿದ್ದಾರೆ. ಅಲ್ಲದೆ ನೀರು, ರಸ್ತೆ, ವಿದ್ಯುತ್‌ ಸಂಪರ್ಕ ಪಡೆಯುತ್ತಿದ್ದಾರೆ. ಪಾಲಿಕೆಗೆ ಮನೆ ಕರ ಪಾವತಿಸುತ್ತಿದ್ದಾರೆ. ಕೆಲ ವರ್ಷಗಳ ನಂತರ ಜಮೀನಿನ ಮೂಲ ಮಾಲೀಕರು ತಮ್ಮದೆಂದು ಬಂದು ಅದನ್ನು ತಮ್ಮ ಕಬ್ಜಾಗೆ ಪಡೆಯುವುದು ಸಾಮಾನ್ಯವಾಗಿದೆ. ಇದರಿಂದ ಸಾಲಸೋಲ ಮಾಡಿ, ಕಷ್ಟಪಟ್ಟು ಮನೆ ಕಟ್ಟಿಕೊಂಡ ಬಡವರು ಬೀದಿಗೆ ಬರುತ್ತಿದ್ದಾರೆ. ಈ ರೀತಿ ಬಡವರಿಗೆ ಮೋಸ ಆಗದಂತೆ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು. ಅಕ್ರಮ ಲೇಔಟ್‌ಗಳ ಮೇಲೆ ನಿಗಾ ವಹಿಸಬೇಕು. ರಾಜ್ಯ ಸರಕಾರ ಅಕ್ರಮ-ಸಕ್ರಮ ಮಸೂದೆ ಕೂಡಲೇ ಜಾರಿಗೆ ತಂದರೆ ಬಡವರು ಅನಧಿಕೃತವಾಗಿ ಖರೀದಿಸಿದ ಪ್ಲಾಟ್ಅನ್ನು ದಂಡ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು. ವೀರೇಶ ಸಂಗಳ, ನಾಗೇಶ ಕಲಬುರ್ಗಿ ಇದ್ದರು.

ದಾಯಗೋಡಿ ಬಿಜೆಪಿಗೆ ಸೇರಿಲ್ಲ:

ಬೆಂಗೇರಿಯಲ್ಲಿ ಬೇರೆಯವರ ಜಾಗವನ್ನು ಬಡವರಿಗೆ ಅಕ್ರಮವಾಗಿ ಮಾರಾಟ ಮಾಡಿದ ಆರೋಪ ಎದುರಿಸುತ್ತಿರುವ ಹೂವಪ್ಪ ದಾಯಗೋಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಅವರು ಇಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದಲೇ ಅವರನ್ನು ಈ ಹಿಂದೆ ಪಕ್ಷದಿಂದ ಹೊರಗೆ ಹಾಕಲಾಗಿತ್ತು ಎಂದು ಬಿಜೆಪಿ ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ ಹೇಳಿದರು. ಇತ್ತೀಚೆಗೆ ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಅವರು ವೇದಿಕೆ ಹಂಚಿಕೊಂಡಿರಬಹುದು. ಆದರೆ ಪಕ್ಷಕ್ಕೆ ಅವರನ್ನು ಸೇರ್ಪಡೆಗೊಳಿಸಿಕೊಂಡಿಲ್ಲ ಎಂದರು.

Advertisement

ನಗರದಲ್ಲಿ ಅನಧಿಕೃತ ಬಡಾವಣೆಗಳಿಗೆ ಬೆಂಬಲ ನೀಡಬಾರದು ಹಾಗೂ ಇಂತಹ ಲೇಔಟ್‌ಗಳ ನಿರ್ಮಾಣಕ್ಕೆ ಕೈಹಾಕಬಾರದೆಂದು ಪಕ್ಷದ ಧುರೀಣರು, ಪಾಲಿಕೆ ಮಾಜಿ ಸದಸ್ಯರು, ಕಾರ್ಯಕರ್ತರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಜಗದೀಶ ಶೆಟ್ಟರ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಸ್ಪಷ್ಟವಾಗಿ ಸೂಚಿಸಿದ್ದಾರೆ. ನಗರದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ ದರ್ಗಾಗಳನ್ನು ಜಿಲ್ಲಾಡಳಿತ ತೆರವುಗೊಳಿಸದಿದ್ದರೆ ಈದ್ಗಾ ಮೈದಾನ ರೀತಿ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next