Advertisement
ಹೌದು, ಕೋವಿಡ್ ಭಯದಿಂದ ಬಿಡುಗಡೆಯನ್ನು ಮುಂದೂಡುತ್ತ ಬಂದಿದ್ದ ಬಹುತೇಕ ಹೊಸಬರ ಸಿನಿಮಾಗಳು ಮತ್ತು ಕೆಲವು ಸ್ಟಾರ್ ಸಿನಿಮಾಗಳು ಈ ವರ್ಷದ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಮೇಲೆ ಕಣ್ಣಿಟ್ಟಿದ್ದವು. ಅಕ್ಟೋಬರ್ ತಿಂಗಳಿನಲ್ಲೇ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಿನಿಮಾಗಳು, ಒಂದೊಂದಾಗಿ ತಮ್ಮ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತ ಬಂದಿದ್ದರಿಂದ ಈ ಪಟ್ಟಿ ನಿಧಾನವಾಗಿ ಬೆಳೆಯುತ್ತ ಹೋಗಿತ್ತು. ಇನ್ನು ಬಹುತೇಕ ಸಿನಿಮಾಗಳು ಅಕ್ಟೋಬರ್‌ನಲ್ಲಿಯೇ ತಮ್ಮ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದವು. ಆದರೆ ಅ. 29ಕ್ಕೆ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನವಾಗಿದ್ದರಿಂದ, ಸಂತಾಪ ಸೂಚಕವಾಗಿ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಅನಿರ್ಧಿಷ್ಟವಾಗಿ ಸ್ವಯಂ ಬಂದ್ ಆಗಿದ್ದವು. ಹೀಗಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದ ಬಹುತೇಕ ಸಿನಿಮಾಗಳು ನಿಗದಿತ ದಿನದಂದು ತೆರೆಗೆ ಬರಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದವು.
Related Articles
Advertisement
ಸದ್ಯ ನ. 5 (ಮೊದಲ ವಾರ) ರಂದು “ಗುಲಾಲ್ ಡಾಟ್ ಕಾಂ’ ಮತ್ತು “ಆಟೋ ರಾಮಣ್ಣ’ ಎಂಬ ಎರಡು ಚಿತ್ರಗಳು ತೆರೆಕಂಡಿದ್ದವು. ಈ ವಾರ ಆ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ನ. 12 (ಎರಡನೇ ವಾರ) ರಂದು “ಪ್ರೇಮಂ ಪೂಜ್ಯಂ’, “ಟಾಮ್ ಅಂಡ್ ಜೆರ್ರಿ’, “ಹಿಟ್ಲರ್’, “ಬೈ 1 ಗೆಟ್ 1 ಫ್ರೀ, “ಕಪೋಕಲ್ಪಿತಂ’, “ಯರ್ರಾಬಿರ್ರಿ’ ಮತ್ತು “ಕುರುಪ್’ ಎಂಬ ಆರು ಚಿತ್ರಗಳು ತೆರೆ ಕಾಣುತ್ತಿವೆ. ನ. 18 (ಮೂರನೇ ವಾರ) ರಂದು “ಗರುಡ ಗಮನ ವೃಷಭ ವಾಹನ’, “100′, “ಲಕ್ಷ್ಯ’, “ಮುಗಿಲ್‌ಪೇಟೆ’, “ಸ್ನೇಹಿತ’, “ನನ್ನ ಹೆಸರು ಕಿಶೋರ’ ಎಂಬ ಆರು ಚಿತ್ರಗಳು ತೆರೆ ಕಾಣಲಿವೆ.
ಇನ್ನು ನ. 26 (ನಾಲ್ಕನೇ ವಾರ) ರಂದು “ಸಖತ್’, “ಅಮೃತ್ ಅಪಾರ್ಟ್ ಮೆಂಟ್ಸ್’, “ಗೋವಿಂದ ಗೋವಿಂದ’, “ಗೋರಿ’ ಎಂಬ ನಾಲ್ಕು ಚಿತ್ರಗಳು ತೆರೆ ಕಾಣಲಿವೆ. ಸದ್ಯ ನವೆಂಬರ್‌ನಲ್ಲಿ ಬಿಡುಗಡೆಯಾಗಿರುವ ಮತ್ತು ಬಿಡುಗಡೆಯನ್ನು ಘೋಷಿಸಿಕೊಂಡಿರುವ ಚಿತ್ರಗಳ ಸಂಖ್ಯೆ 15ಕ್ಕೂ ಹೆಚ್ಚಿದೆ. ಈ ಸಾಲಿಗೆ ಕೊನೆ ಕ್ಷಣದಲ್ಲಿ ಇನ್ನೂ ಒಂದಷ್ಟು ಚಿತ್ರಗಳು ಸೇರ್ಪಡೆಯಾಗುವ ಸಾಧ್ಯತೆ ಇರುವುದರಿಂದ, ನವೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಸಂಖ್ಯೆ 25 ದಾಟಿದರೂ ಅಚ್ಚರಿ ಇಲ್ಲ. ಒಟ್ಟಾರೆ ನವೆಂಬರ್ ತಿಂಗಳು ರಿಲೀಸ್ ಸಿನಿಮಾಗಳ ಸುಗ್ಗಿ ಇದ್ದು, ಪ್ರೇಕ್ಷಕ ಪ್ರಭುಗಳು ಇಷ್ಟೊಂದು ವೆರೈಟಿ ಸಿನಿಮಾಗಳ ಪೈಕಿ ಯಾವುದನ್ನು ಅಪ್ಪಿಕೊಳ್ಳುತ್ತಾರೆ, ಯಾವುದನ್ನ ಒಪ್ಪಿಕೊಳ್ಳುತ್ತಾರೆ ಅನ್ನೋದು ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.