Advertisement

ಕೆಸರು ಗದ್ದೆ ಕ್ರೀಡಾಕೂಟದಲ್ಲಿ 100ಕ್ಕೂ ಅಧಿಕ ಪ್ರಶಸ್ತಿ

06:53 PM Dec 13, 2021 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ತಿರುಮಲೇಶ್ವರ ಸಾಕೋಟೆ ಎಂಬ ಯುವಕ ತುಳುನಾಡಿನ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದ್ದಾರೆ. ಇದೀಗ ತಿರುಮಲೇಶ್ವರ ಇತ್ತೀಚೆಗೆ ನೆಲ್ಯಾಡಿ ಹಾರ್ಪಳದಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಎರಡು ಪ್ರಶಸ್ತಿ ಪಡೆದು ತನ್ನ ಪ್ರಶಸ್ತಿಗಳ ಸಂಖ್ಯೆಯನ್ನು 104ಕ್ಕೆ ಏರಿಸಿದ್ದಾರೆ.

Advertisement

ತಿರುಮಲೇಶ್ವರ ಕೆಸರು ಗದ್ದೆ ಕ್ರೀಡಾ ಕೂಟದಲ್ಲಿ ಮೊದಲಿಗೆ ಭಾಗವಹಿಸಿದ್ದು ಕಾವಿನಮೂಲೆಯಲ್ಲಿ. ಅಲ್ಲಿ ಯಾವುದೇ ಪ್ರಶಸ್ತಿ ಪಡೆಯಲು ಸಾಧ್ಯವಾಗದಿದ್ದರೂ ಛಲ ಬಿಡದ ಅವರು, ಮುಂದೆ ರೆಂಜಿಲಾಡಿಯ ನೂಜಿಬೈಲ್‌ನಲ್ಲಿ ನಡೆದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮೊದಲ ಪ್ರಶಸ್ತಿ ಪಡೆದರು. ಬಳಿಕ ತುಳುನಾಡಿನ ಹಲವೆಡೆ ನಿರಂತರವಾಗಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ 104 ಪ್ರಶಸ್ತಿ ಪಡೆದು ಸಾಧನೆ ಮೆರೆದಿದ್ದಾರೆ. ತಿರುಮಲೇಶ್ವರ ಕೆಲವು ಕಡೆ ಸೋಲನ್ನು ಅನುಭವಿಸಿದ್ದಾರೆ. ಆದರೆ ಅವರು ತನ್ನ ಸಾಧನೆಯ ಛಲದಿಂದ ಯಾವುತ್ತೂ ಹಿಂದೆ ಸರಿಯಲಿಲ್ಲ.

26 ವರ್ಷದ ತಿರುಮಲೇಶ್ವರ ಅಂಗಡಿ ಉದ್ಯಮ ನಡೆಸುವ ಜತೆಗೆ ಕೃಷಿಯನ್ನೂ ಮಾಡುತ್ತಾರೆ. ಬಿಡುವಿನ ವೇಳೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಸ್ತುತ ನೂಜಿಬೈಲ್‌ ತುಳುನಾಡ ತುಡರ್‌ ಯುವಕ ಮಂಡಲದ ಅಧ್ಯಕ್ಷರಾಗಿ, ತೆಗ್‌ರ್‌ ತುಳುಕೂಟದ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಂಬಳದಲ್ಲೂ ಆಸಕ್ತಿ ಹೊಂದಿರುವ ಇವರು ಕಂಬಳದ ಕೋಣಗಳ ಓಡಿಸುವ ತರಬೇತಿಯನ್ನು ಮೂಡುಬಿದಿರೆಯಲ್ಲಿ ಪಡೆಯುತ್ತಿದ್ದಾರೆ. ತನ್ನ ಗದ್ದೆಯಲ್ಲಿ ಬೆಳಗ್ಗೆ ಬೇಗ ಎದ್ದು ಓಟದ ತರಬೇತಿ ನಡೆಸುವ ಇವರು ಕೆಸರು ಗದ್ದೆ ಕ್ರೀಡಾಕೂಟದ ಆಸಕ್ತ ಯುವಕರನ್ನು ಈ ಕ್ರೀಡೆಗೆ ಆಹ್ವಾನಿಸಿ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜತೆಗೆ ಕೆಸರುಗದ್ದೆ ಕ್ರೀಡಾಕೂಟ ಆಯೋಜಿ ಸುವಲ್ಲಿಯೂ ಸಹಕಾರ ನೀಡುತ್ತಿದ್ದಾರೆ.

ಕೆಸರು ಗದ್ದೆ ಕ್ರೀಡಾಕೂಟ
ತುಳುನಾಡಿನ ಅಪ್ಪಟ ಗ್ರಾಮೀಣ ಸೊಗಡಿನ, ಸಂಸ್ಕೃತಿಯ ಪ್ರತೀಕ ಕೆಸರು ಗದ್ದೆ ಕ್ರೀಡಾಕೂಟ. ಇದು ಕೆಸರು ಗದ್ದೆಯಲ್ಲಿ ನಡೆಯುತ್ತದೆ. ಕೊಯ್ಲು ಮುಗಿದ ಬಳಿಕ ಈ ಕ್ರೀಡಾಕೂಟ ಸಂಘಟನೆಗಳ ನೇತೃತ್ವದಲ್ಲಿ ಆಯೋಜನೆಗೊಳ್ಳುತ್ತದೆ. ಕೆಸರು ಗದ್ದೆ ಓಟ, ಹಿಮ್ಮುಖ ಓಟ, ರಿಲೇ, ಗೋಣಿಚೀಲ ಓಟ, ಹಗ್ಗಜಗ್ಗಾಟ, ಕಬಡ್ಡಿ, ಮಡಿಕೆ ಒಡಿಯುವುದು, ನಿಧಿ ಶೋಧ, ಉಪ್ಪು ಮೂಟೆ ಸೇರಿದಂತೆ 30ರಿಂದ 50 ಬಗೆಯ ಸ್ಪರ್ಧೆಗಳು ನಡೆಯುತ್ತವೆ.

ಶ್ಲಾಘನೀಯ
ಕೆಸರು ಗದ್ದೆ ಕ್ರೀಡಾಕೂಟ ನನ್ನ ಆಸಕ್ತಿಯ ಕ್ಷೇತ್ರ. ಇಲ್ಲಿ ಆಡುವುದು ಮನಸ್ಸಿಗೆ ಉಲ್ಲಾಸ ನೀಡುವ ಜತೆಗೆ ಪ್ರತಿಭೆ ಅನಾವರಣ ಮಾಡಲು ಸಾಧ್ಯ. ಕೆಸರು ಗದ್ದೆ ಆಯೋಜನೆ ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ.
-ತಿರುಮಲೇಶ್ವರ ಸಾಕೋಟೆ, ರೆಂಜಿಲಾಡಿ

Advertisement

-ದಯಾನಂದ ಕಲ್ನಾರ್

Advertisement

Udayavani is now on Telegram. Click here to join our channel and stay updated with the latest news.

Next