ಪುತ್ತೂರು: ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಸಂಪರ್ಕ ಅಡೆಂಚಿಲಡ್ಕ ರಸ್ತೆ ಬದಿಯಲ್ಲಿ 10ಕ್ಕೂ ಅಧಿಕ ಶ್ವಾನಗಳು ಸತ್ತು ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಗೋಣಿಯಲ್ಲಿ ಮತ್ತು ಕೈಕಾಲು ಕಟ್ಟಿದ ರೀತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಶ್ವಾನಗಳಿಗೆ ವಿಷವಿಕ್ಕಿ ಹಿಂಸಾತ್ಮಕ ರೀತಿಯಲ್ಲಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ರಸ್ತೆ ಬದಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಶೋಧ ನಡೆಸಿದಾಗ ಪೊದೆಗಳ ಬಳಿ ಶ್ವಾನಗಳ ಶವ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಗ್ರಾಮಸ್ಥರು ಬನ್ನೂರು ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ್ದಾರೆ. ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಪಿಡಿಒ ಸ್ಥಳಕ್ಕೆ ಆಗಮಿಸಿ ಪಶು ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ|ಧರ್ಮಪಾಲ್ ಅವರು ಪರಿಶೀಲನೆ ನಡೆಸಿದ್ದಾರೆ.
ಪೊಲೀಸ್ ದೂರು
ಶ್ವಾನಗಳ ಆಕಸ್ಮಿಕ ಸಾವುಗಳ ಕುರಿತು ಶಂಕೆ ವ್ಯಕ್ತಪಡಿಸಿದ ಪ್ರಾಣಿ ಪ್ರಿಯ ರಾಜೇಶ್ ಬನ್ನೂರು ಮತ್ತು ಶಶಿಧರ್ ವಿ.ಎನ್. ಅವರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.