ಬಂಟ್ವಾಳ: ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡಲು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಜು. 3ರಂದು ಸಜೀಪಮೂಡ ಸರಕಾರಿ ಪದವಿ ಪೂರ್ವ ಕಾಲೇಜು ನೂತನ ಕಟ್ಟಡ ಉದ್ಘಾಟಿಸಿ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಮತ್ತು ಸಮವಸ್ತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭವಿಷ್ಯತ್ತಿನಲ್ಲಿ ಉತ್ತಮ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರಕ ವಾತಾವರಣ ನಿರ್ಮಾಣ ಮಾಡಲು ಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಸಾಮಾಜಿಕ ಬದಲಾವಣೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಈ ಕಾಲೇಜು ಕಟ್ಟಡವು 1.04 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದು ಅದರಲ್ಲಿ ಮೊದಲ ಹಂತದ 50 ಲ.ರೂ. ವೆಚ್ಚದ ಕೆಲಸ ಪೂರ್ಣಗೊಂಡು ಉದ್ಘಾಟನೆಯಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರವು ವಿವಿಧ ಸವಲತ್ತುಗಳಾದ ಸಮವಸ್ತ್ರ, ಶೂ, ಸೈಕಲ್, ಉಚಿತ ಪುಸ್ತಕ ಮೊದಲಾದವುಗಳನ್ನು ನೀಡುತ್ತಿದೆ ಎಂದರು.
ಸಜೀಪಮುನ್ನೂರು, ಸಜೀಪಮೂಡದಲ್ಲಿ ಅನೇಕ ರಸ್ತೆ ಅಭಿವೃದ್ಧಿ ಕೆಲಸ ಆಗಿವೆ. ಮಹತ್ವದ ಕುಡಿಯುವ ನೀರಿನ ಯೋಜನೆ, ಕೃಷಿ ಉದ್ದೇಶಿಯ ಏತ ನೀರಾವರಿ ಯೋಜನೆ ಇಲ್ಲಿಗೆ ಮಂಜೂರಾಗಿದೆ ಎಂದು ಸಚಿವರು ತಿಳಿಸಿದರು. ವೇದಿಕೆಯಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮಹಮ್ಮದ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಆಲಿ, ಸದಸ್ಯ ಕೆ. ಸಂಜೀವ ಪೂಜಾರಿ, ಸಜೀಪಮೂಡ ಗ್ರಾ.ಪಂ. ಅಧ್ಯಕ್ಷ ಗಣಪತಿಭಟ್, ಉಪಾಧ್ಯಕ್ಷೆ ಮೀರಾ ಮಿರಾಂದ, ಸದಸ್ಯ ಯೂಸುಫ್ ಕರಂದಾಡಿ, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ, ಗಣ್ಯರಾದ ಮಹಾಬಲ ರೈ, ಬಿಇಒ ಲೋಕೇಶ್ ಸಿ., ಎಸ್‌ಡಿಎಂಸಿ ಸದಸ್ಯರಾದ ವಿಶ್ವನಾಥ ಬೆಳ್ಚಾಡ, ಎಂ. ಪರಮೇಶ್ವರ ಮೂಲ್ಯ, ಅಬ್ದುಲ್ ಅಜೀಜ್ ಬೊಳ್ಳಾಯಿ, ರಮೇಶ್ ಅನ್ನಪ್ಪಾಡಿ, ಚಂದು ನಾಯ್ಕ, ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶುಪಾಲ ಬಾಬು ಗಾಂವಕರ್ ಸ್ವಾಗತಿಸಿ ಉಪನ್ಯಾಸಕಿ ಗಾಯತ್ರಿ ವಂದಿಸಿದರು. ಉಪನ್ಯಾಸಕಿ ಉಷಾಕಿರಣ್ ಕಾರ್ಯಕ್ರಮ ನಿರ್ವಹಿಸಿದರು.