Advertisement

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

05:04 PM Dec 20, 2024 | Team Udayavani |

ಕನ್ನಡ ಚಿತ್ರರಂಗದ ಮಾತೃಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಎನ್‌. ನರಸಿಂಹಲು ಆಯ್ಕೆಯಾಗಿದ್ದಾರೆ. ಪ್ರದರ್ಶಕ ವಲಯದಿಂದ ಆಯ್ಕೆಯಾದ ಇವರು ಉತ್ತರಹಳ್ಳಿಯ ವೈಭವಿ, ವೈಷ್ಣವಿ ಹಾಗೂ ಎಂ.ಎಸ್‌. ಪಾಳ್ಯದ ವೈನಿಧಿ ಚಿತ್ರಮಂದಿರಗಳ ಮಾಲೀಕರು. ಸದ್ಯ ಮಂಡಳಿಯ ಚುಕ್ಕಾಣಿ ಹಿಡಿದಿರುವ ನರಸಿಂಹಲು ಚಿತ್ರರಂಗದ ಕುರಿತಾದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿದ್ದು, ಈ ಕುರಿತಾಗಿ ಮಾತನಾಡಿದ್ದಾರೆ.

Advertisement

ಕನ್ನಡ ಚಿತ್ರರಂಗದ ಮಾತೃಸಂಸ್ಥೆಯ ಅಧ್ಯಕ್ಷರಾಗಿದ್ದೀರಿ. ಹೇಗನಿಸುತ್ತಿದೆ?

ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ಕನ್ನಡ ಚಿತ್ರರಂಗಕ್ಕೆ ಬೇರೆ ಬೇರೆ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾ ಹಂತ ಹಂತವಾಗಿ ಬೆಳೆದವನು. ಇವತ್ತು ಮಂಡಳಿಯ ಅಧ್ಯಕ್ಷನಾಗಿದ್ದೇನೆ ಎಂದಾಗ ನನಗೆ ಆಶ್ಚರ್ಯವಾಗುತ್ತಿದೆ. ಇದೊಂದು ಜವಾಬ್ದಾರಿಯುತ ಸ್ಥಾನ. ಇದನ್ನು ಸಮರ್ಥವಾಗಿ ನಿಭಾಹಿಸುವ ವಿಶ್ವಾಸವಿದೆ.

ಚಿತ್ರರಂಗದ ಏಳಿಗೆಗಾಗಿ ನಿಮ್ಮ ಯೋಜನೆಗಳೇನು?

ಒಂದಷ್ಟು ಅಜೆಂಡಾ ಇದೆ. ಮುಖ್ಯವಾಗಿ ನಿರ್ಮಾಪಕರು, ವಿತರಕರು ಸಾಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಇದರ ಜೊತೆಗೆ ಚಿತ್ರರಂಗಕ್ಕೆ ಹಲವು ವರ್ಷ ದುಡಿದ ಅನೇಕ ಹಿರಿಯರು ಇವತ್ತು ಔಷಧಿಗೂ ಕಾಸಿಲ್ಲದಂತಹ ಸ್ಥಿತಿಯಲ್ಲಿದ್ದಾರೆ. ಇಂಥವರಿಗೆ ಏನಾದರೂ ಸಹಾಯವಾಗುವ ನಿಟ್ಟಿನಲ್ಲಿ ಕಾರ್ಯರೂಪಿಸಬೇಕಿದೆ. ಇದರ ಜೊತೆಗೆ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಈ ಮೂರು ವಲಯಗಳನ್ನು ಜೊತೆಗೆ ಕರೆದುಕೊಂಡು ಹೋಗಬೇಕಿದೆ.

Advertisement

ನಿಮ್ಮ ಮುಂದಿರುವ ಸವಾಲುಗಳೇನು?

ನನಗೂ ಗೊತ್ತು, ನನ್ನ ಮುಂದೆ ಹಲವು ಸವಾಲುಗಳಿವೆ. ಅದು ಚಿತ್ರಮಂದಿರ, ಪರಭಾಷಾ ಹಾವಳಿ, ಸಾಲು ಸಾಲು ಸಿನಿಮಾ ಬಿಡುಗಡೆ, ಟಿಕೆಟ್‌ ದರ.. ಹೀಗೆ ಲೆಕ್ಕ ಹಾಕಿದರೆ ಪಟ್ಟಿ ಬೆಳೆಯುತ್ತದೆ. ಇವೆಲ್ಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಳ್ಳೆಯ ತಂಡವಿದೆ. ಜೊತೆಗೆ ಸಾ.ರಾ.ಗೋವಿಂದು ಅವರ ಮಾರ್ಗದರ್ಶನವಿದೆ.

ಸ್ಟಾರ್‌ ಸಿನಿಮಾ ಕೊರತೆ ಕಾಡುತ್ತಿದೆ ಎಂಬ ಮಾತಿದೆ?

ಹೌದು, ಮುಖ್ಯವಾಗಿ ನಮ್ಮ ಕಲಾವಿದರು ಸಾಥ್‌ ಕೊಡಬೇಕು. ಅದರಲ್ಲೂ ಸ್ಟಾರ್‌ಗಳು ಹೆಚ್ಚೆಚ್ಚು ಸಿನಿಮಾ ಮಾಡಿದಾಗ ವರ್ಷಪೂರ್ತಿ ಕನ್ನಡ ಚಿತ್ರರಂಗದ ಬಿಝಿನೆಸ್‌ ಜೋರಾಗಿರುತ್ತದೆ. ಆಗ ಪರಭಾಷಾ ಹಾವಳಿಯನ್ನು ನಾವು ತಡೆಯಬಹುದು.

ಯಾವುದೇ ನಿಯಂತ್ರಣವಿಲ್ಲದೇ ಸಿನಿಮಾ ಬಿಡುಗಡೆ ಆಗಿ ನಿರ್ಮಾಪಕರು ಕೈ ಸುಟ್ಟುಕೊಳ್ಳುತ್ತಿದಾರೆ?

ಈ ವಿಚಾರದ ಅರಿವೂ ನನಗೂ ಇದೆ. ಇಲ್ಲಿ ಮುಖ್ಯವಾಗಿ ನಿರ್ಮಾಪಕ ಯೋಚಿಸಬೇಕು. ಎರಡ್ಮೂರು ವರ್ಷ ಸಿನಿಮಾ ಮಾಡಲು ನಿರ್ದೇಶಕನಿಗೆ ಸಮಯ ಕೊಡುವ ನಿರ್ಮಾಪಕ ಯಾಕೋ ಸಿನಿಮಾ ವಿಚಾರದಲ್ಲಿ ಆತುರಕ್ಕೆ ಬೀಳುತ್ತಿದ್ದಾನೆ. ಈ ಕುರಿತು ಮಂಡಳಿಯಲ್ಲಿ ಚರ್ಚೆ ಮಾಡಲಾಗುವುದು.

ಪ್ರಶಸ್ತಿ, ಸಬ್ಸಿಡಿ … ಹೀಗೆ ಒಂದಷ್ಟು ಸಮಸ್ಯೆಗಳು ಕಣ್ಣ ಮುಂದಿವೆ?

ಚಿತ್ರರಂಗದ ಯಾವುದೇ ಸಮಸ್ಯೆಯಾದರೂ ಅದನ್ನು ಬಹೆಹರಿಸಲು ಪ್ರಾಮಾಣಿವಾಗಿ ಪ್ರಯತ್ನಿಸುವೆ. ಹುಮ್ಮಸ್ಸಿನ ನಮ್ಮ ಹೊಸ ತಂಡ ಕೂಡಾ ಇದಕ್ಕೆ ಸಾಥ್‌ ನೀಡಲಿದೆ. ಎಲ್ಲವನ್ನು ಮುಂಚಿತವಾಗಿ ಹೇಳುವುದಕ್ಕಿಂತ ಮಾಡಿತೋರಿಸುವುದು ಉತ್ತಮ.

ಕರ್ನಾಟಕದ ಪ್ರೇಕ್ಷಕರ ಕಾಸು ದೊಡ್ಡ ಮಟ್ಟದಲ್ಲಿ ಪರಭಾಷಾ ಪಾಲಾಗುತಿದೆಯಲ್ಲ?

ಹೌದು, ಹಾಗಂತ ನಾವು ಇಲ್ಲಿ ಪರಭಾಷಾ ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂದು ಹೇಳುವಂತಿಲ್ಲ. ಅದರ ಬದಲಿಗೆ ಟಿಕೆಟ್‌ ಬೆಲೆಯನ್ನ ನಿಯಂತ್ರಿಸಬೇಕು. ಏಕರೂಪ ಟಿಕೆಟ್‌ ದರ ಜಾರಿಗೆ ಬಂದರೆ ಎಲ್ಲವೂ ಸರಿಯಾಗುತ್ತದೆ. ಈಗಾಗಲೇ ಇದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next