ಮುಂಬಯಿ: ನಮ್ಮ ದೇಶವು ಸ್ವಾವಲಂಬಿಯಾಗಿರಬೇಕು. ಒಂದು ದೇಶವು ಹೆಚ್ಚು ಸ್ವಾವಲಂಬಿಯಾಗಿದ್ದರೆ ಆ ದೇಶವು ಹೆಚ್ಚು ಸುರಕ್ಷಿತವಾಗಿರುತ್ತದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ದಾದರ್‌ನ ಶಾಲೆಯೊಂದರಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಧ್ವಜಾರೋಹಣಗೈದು ಶುಭ ಹಾರೈಸಿದ ಅವರು, ಸ್ವದೇಶಿ ಎಂದರೆ ಎಲ್ಲವನ್ನೂ ತೊರೆಯುವುದು ಎಂದಲ್ಲ. ನಮ್ಮ ನಿಯಮಗಳ ಪ್ರಕಾರ ಅಂತಾರಾಷ್ಟ್ರೀಯ ವ್ಯಾಪಾರ ಮುಂದುವರಿ ಯುತ್ತದೆ. ಸ್ವದೇಶಿ ಎಂದರೆ ಸ್ವಾವಲಂಬನೆ ಮತ್ತು ಅಹಿಂಸೆಯಾಗಿದೆ. ಅದಕ್ಕಾಗಿ ನಾವು ಸ್ವಾವಲಂಬಿಗಳಾಗಿರಬೇಕು.
ನಾವು ಇಂಟರ್ನೆಟ್ ಮತ್ತು ತಂತ್ರಜ್ಞಾನವನ್ನು ಬಳಸುತ್ತೇವೆ. ನಾವು ಅದರ ನೈಜ ತಂತ್ರಜ್ಞಾನವನ್ನು ಹೊಂದಿಲ್ಲ. ಅದನ್ನು ಹೊರಗಿನಿಂದ ಪಡೆಯುತ್ತೇವೆ. ನಾವು ಚೀನದ ಬಗ್ಗೆ ಮಾತನಾಡಬಹುದು. ಚೀನದ ಉತ್ಪನ್ನಗಳ ಬಗ್ಗೆ ಬಹಿಷ್ಕಾರಕ್ಕೆ ಕರೆ ನೀಡಬಹುದು. ಆದರೆ ನಮ್ಮಲ್ಲಿರುವ ಮೊಬೈಲ್ ಬರುವುದಾದರೂ ಎಲ್ಲಿಂದ ಎಂದು ಪ್ರಶ್ನಿಸಿ, ಚೀನದ ಮೇಲೆ ಅವಲಂಬನೆ ಹೆಚ್ಚಾಗಬಾರದು ಎಂದರು.
ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಜನರನ್ನು ಸ್ಮರಿಸಿಕೊಂಡ ಅವರು, ಯುದ್ಧಗಳಲ್ಲಿ ಹೋರಾಡಿದ ಮಹಾಪುರುಷರು ಸ್ಫೂರ್ತಿ ನೀಡುತ್ತಾರೆ. ಅವರನ್ನು ಇಂದು ಸ್ಮರಿಸಿ ಕೊಳ್ಳಬೇಕು. 1947ರ ಆ. 15ರಿಂದ ನಾವು ನಮ್ಮ ಜೀವನವನ್ನು ನಡೆಸಲು ಸ್ವತಂತ್ರರಾಗಿದ್ದೇವೆ. ವಿಕೇಂದ್ರಿಕೃತ ಉತ್ಪಾದನೆಯು ಭಾರತದ ಆರ್ಥಿಕತೆಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ನಾವು ಎಲ್ಲರ ಯೋಗಕ್ಷೇಮವನ್ನು ಪರಿಗ ಣಿಸಿದಾಗ ನಾವು ಸಂತೋಷವಾಗಿರುತ್ತೇವೆ. ಸಂತೋಷವಾಗಿರಲು ನಮಗೆ ಉತ್ತಮ ಹಣಕಾಸಿನ ಅಗತ್ಯವಿದೆ ಮತ್ತು ಇದಕ್ಕಾಗಿ ನಮಗೆ ಆರ್ಥಿಕ ಬಲ ಬೇಕು. ಸರಕಾರದ ಕೆಲಸವು ಕೈಗಾರಿಕೆಗಳನ್ನು ಬೆಂಬಲಿಸುವುದು ಮತ್ತು ಪ್ರೋತ್ಸಾಹಿಸುವುದಾಗಿದೆ. ದೇಶದ ಅಭಿವೃದ್ಧಿಗೆ ಮುಖ್ಯವಾದುದನ್ನು ಉತ್ಪಾದಿಸಲು ಸರಕಾರ ನಿರ್ದೇಶನಗಳನ್ನು ನೀಡಬೇಕು ಎಂದು ಎಂದು ಭಾಗವತ್ ಹೇಳಿದರು.