Advertisement

ಎಸ್‌ಡಿಆರ್‌ಎಫ್ ಗೆ ಇನ್ನಷ್ಟು ಬಲ: ಕೌಸರ್‌

11:26 PM Sep 23, 2020 | mahesh |

ಮಂಗಳೂರು: ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್)ಯನ್ನು ಬಲಿಷ್ಠಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಪೂರಕವಾಗಿ ನಿವೃತ್ತ ಸೈನಿಕರನ್ನು ಸೇರ್ಪಡೆಗೊಳಿಸಿ ಕೊಳ್ಳಲಾಗುತ್ತಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಪ ನಿರ್ದೇಶಕ (ತರಬೇತಿ ಮತ್ತು ಎಸ್‌ಡಿಆರ್‌ಎಫ್) ಯೂನಸ್‌ ಆಲಿ ಕೌಸರ್‌ ತಿಳಿಸಿದರು. ಅವರು ಪಾಂಡೇಶ್ವರದ ಅಗ್ನಿ ಶಾಮಕ ಠಾಣೆಗೆ ಬುಧವಾರ ಭೇಟಿ ನೀಡಿ ಎಸ್‌ಡಿಆರ್‌ಎಫ್ ತರಬೇತಿ ಯನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಬೆಂಗಳೂರು, ಮಂಗಳೂರು, ಬೆಳಗಾವಿ ಮತ್ತು ಗುಲ್ಬರ್ಗದಲ್ಲಿ ಈಗಾಗಲೇ ಎಸ್‌ಡಿಆರ್‌ಎಫ್ ಘಟಕಗಳಿವೆ. ದಾವಣಗೆರೆ, ಮೈಸೂರಿನ ಲ್ಲಿಯೂ ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಎನ್‌ಡಿಆರ್‌ಎಫ್ ಇರುವಂತೆ ರಾಜ್ಯ ಮಟ್ಟದಲ್ಲಿ ಎಸ್‌ಡಿಆರ್‌ಎಫ್ ಕಾರ್ಯನಿರ್ವಹಿಸು ತ್ತಿದೆ. ಪ್ರಾಕೃತಿಕ ವಿಕೋಪ ಸಂದರ್ಭ ವ್ಯವಸ್ಥಿತವಾಗಿ ಕಾರ್ಯಾಚರಿಸುವ ಉದ್ದೇಶದಿಂದ ಎಸ್‌ಡಿಆರ್‌ಎಫ್ನ್ನು 2012ರಲ್ಲಿ ರಚಿಸಲಾಗಿದ್ದು ಇದು ಅಗ್ನಿಶಾಮಕದಳದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಕೌಸರ್‌ ಹೇಳಿದರು.

ಸಿಬಂದಿ ಕೊರತೆ
ಎಸ್‌ಡಿಆರ್‌ಎಫ್ ಗೆ ಪೊಲೀಸ್‌ ಇಲಾಖೆಯ ಕೆಎಸ್‌ಆರ್‌ಪಿ, ಆಂತರಿಕ ಭದ್ರತಾ ಪಡೆ ಮೊದಲಾದ ವಿಭಾಗಗಳಿಂದಲೂ ಸಿಬಂದಿಯನ್ನು ನೇಮಿಸಿಕೊಳ್ಳಬೇಕಿದೆ. ಆದರೆ ಸದ್ಯಕ್ಕೆ ಪೊಲೀಸ್‌ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಪೌರ ರಕ್ಷಣಾ ಪಡೆಯ ತಲಾ 25 ಮಂದಿಯ ಸೇವೆ ಪಡೆದುಕೊಳ್ಳಲಾಗುತ್ತಿದೆ. ಇದರ ಜತೆಗೆ ಇದೀಗ ಪ್ರತಿಯೊಂದು ಘಟಕದಲ್ಲಿಯೂ ತಲಾ 25 ಮಂದಿ ನಿವೃತ್ತ ಸೈನಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಸರಕಾರದಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಮಂಗಳೂರಿನಲ್ಲಿ ಈಗಾಗಲೇ 25 ಮಂದಿ ನಿವೃತ್ತ ಸೈನಿಕರು ಸೇವೆಗೆ ಸೇರ್ಪಡೆಯಾಗಿದ್ದು ತರಬೇತಿ ನಡೆಯುತ್ತಿದೆ ಎಂದರು.

ರಾಜ್ಯ ವಿಪತ್ತು ಸ್ಪಂದನಾ ಪಡೆ “ಬಿ’ ಕಂಪೆನಿಯ ಡೆಪ್ಯುಟಿ ಕಮಾಂಡೆಂಟ್‌ ಜಿ. ತಿಪ್ಪೇಸ್ವಾಮಿ, ಮಂಗಳೂರು ವಲಯ ಪ್ರಭಾರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಚ್‌.ಎಂ. ವಸಂತ ಕುಮಾರ್‌, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ. ಮಹಮ್ಮದ್‌ ಜುಲ್ಫಿಕರ್‌ ನವಾಜ್‌ ಉಪಸ್ಥಿತರಿದ್ದರು.

ಅಗತ್ಯ ಸಲಕರಣೆ ಪೂರೈಕೆ
ಎಸ್‌ಡಿಆರ್‌ಎಫ್ಗೆ ಅಗತ್ಯ ಸಲಕರಣೆಗಳನ್ನು ಸರಕಾರ ನೀಡಿದೆ. ಮಂಗಳೂರಿನ ಘಟಕವು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ಉಡುಪಿಯಲ್ಲಿ ನೆರೆ ಉಂಟಾದಾಗ ಸುಮಾರು 400 ಮಂದಿಯನ್ನು ಎಸ್‌ಡಿಆರ್‌ಎಫ್ ರಕ್ಷಿಸಿದೆ ಎಂದು ಯೂನಸ್‌ ಆಲಿ ಕೌಸರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next