ಅಫಜಲಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಮಳೆ ಉತ್ತಮವಾಗಿ ಬಂದಿದೆ. ಆದರೂ ತಾಲೂಕಿನ ಅನೇಕ ಕಡೆಯಲ್ಲಿ ಸಮರ್ಪಕ ಮಳೆ ಆಗದೇ ಇರುವುದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿಲ್ಲ. ಸದ್ಯ ತಾಲೂಕಿನಾದ್ಯಂತ ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ.
ಈ ವರ್ಷದ ವಾಡಿಕೆ ಮಳೆ ಜನವರಿಯಿಂದ ಜೂನ್ ಅಂತ್ಯದ ವರೆಗೆ 160.5 ಮಿ.ಮೀ ಆಗಬೇಕಾಗಿತ್ತು. ಆದರೆ ಈ ವರೆಗೆ 169.6 ಮಿ.ಮೀ ಮಳೆಯಾಗಿದೆ. ಅಂದರೆ ತಾಲೂಕಿನಾದ್ಯಂತ 9.1 ಮಿ.ಮೀ ಮಳೆ ಹೆಚ್ಚಾಗಿದೆ. ಮಳೆ ಹೆಚ್ಚಾಗಿರುವ ಕಡೆಗಳಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮಳೆ ಕೊರತೆ ಇದ್ದಲ್ಲಿ ಬಿತ್ತನೆ ಕಾರ್ಯ ಕುಂಠಿತವಾಗಿದೆ.
ಮಂದಗತಿಯಲ್ಲಿ ಬಿತ್ತನೆ: ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗಿದ್ದರೂ ಗೊಬ್ಬೂರ (ಬಿ) ವಲಯದಲ್ಲಿ ಮಾತ್ರ ಮಳೆಯಾಗಿಲ್ಲ. ಕರ್ಜಗಿ ವಲಯದಲ್ಲಿ 191.4 ಮಿ.ಮೀ ಹೆಚ್ಚು ಮಳೆ, ಅಫಜಲಪುರ ವಲಯದಲ್ಲಿ 178.1 ಮಿ.ಮೀ, ಅತನೂರ 188.2 ಮಿ.ಮೀ ಮಳೆಯಾಗಿದ್ದು, ಗೊಬ್ಬೂರ (ಬಿ)ಯಲ್ಲಿ ಅತಿ ಕಡಿಮೆ ಅಂದರೆ 120.8 ಮಿ.ಮೀ ಮಳೆಯಾಗಿದೆ. ಒಟ್ಟು ವಾಡಿಕೆಗಿಂದ 39.7 ಮಿ.ಮೀ ಮಳೆ ಕೊರತೆಯಾಗಿದೆ. ಹೀಗಾಗಿ ಗೊಬ್ಬೂರ(ಬಿ)ಯಲ್ಲಿ ರೈತರು ಬಿತ್ತನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮುಂಗಾರು ಹಂಗಾಮಿನ ಬೆಳೆಗಳು ಸಕಾಲಕ್ಕೆ ಬಿತ್ತನೆಯಾಗದೆ ಇರುವುದರಿಂದ ಬೆಳೆಗಳು ಫಲವತ್ತಾಗಿ ಬರುವುದಿಲ್ಲ. ಆದರೂ ಮಳೆ ಬರುವ ತನಕ ಬಿತ್ತನೆಗೆ ಮುಂದಾಗುವುದು ಬೇಡ ಎನ್ನುವುದು ರೈತರ ಅಭಿಪ್ರಾಯವಾಗಿದೆ.
ತೊಗರಿಗೆ ಹೆಚ್ಚು ಒತ್ತು ನೀಡಿದ ರೈತರು: ಕಳೆದ ವರ್ಷ ಹತ್ತಿ ಬೆಳೆಗೆ ಹೆಚ್ಚು ಒತ್ತು ನೀಡಿದ್ದ ರೈತರು ಈ ಬಾರಿ ತೊಗರಿ ಬಿತ್ತನೆಗೆ ಹೆಚ್ಚು ಒಲವು ತೋರಿದ್ದಾರೆ. ಕಳೆದ ವರ್ಷ ಹತ್ತಿ ಬಿತ್ತನೆ ಪ್ರತಿ ಬಾರಿಗಿಂತ 30 ಪ್ರತಿಶತ ಹೆಚ್ಚಾಗಿತ್ತು. ಈ ವರ್ಷ ಪ್ರತಿ ಬಾರಿಗಿಂತ 30 ಪ್ರತಿಶತ ಹತ್ತಿ ಬಿತ್ತನೆ ಕಡಿಮೆಯಾಗಲಿದೆ. ತೊಗರಿ ಜೊತೆಗೆ ಕಬ್ಬು ನಾಟಿಗೂ ರೈತರು ಹೆಚ್ಚು ಒಲವು ತೋರಿದ್ದಾರೆ. ಉತ್ತಮ ಮಳೆ ನಿರೀಕ್ಷೆ: ಪ್ರತಿ ವರ್ಷ ಸಾಲ ಮಾಡಿ ಭೂಮಿಗೆ ಬೀಜ ಹಾಕ್ತೇವೆ. ಆದ್ರೆ ಬಿತ್ತಿದ ಕೂಲಿನೂ ಸಿಗೋದಿಲ್ಲ. ಅದಕ್ಕೆ ಉತ್ತಮ ಮಳೆ ಆಗೋವರೆಗೂ ಬಿತ್ತನೆ ಮಾಡಬಾರದು ಎಂದು ಸುಮ್ಮನೆ ಇದ್ದೇವೆ ಎನ್ನುತ್ತಾರೆ ರೈತರಾದ ನಾಗೇಶ ಮಡಿವಾಳ, ದಾನಯ್ಯ ಹಿರೇಮಠ.
ಅಫಜಲಪುರ ತಾಲೂಕಿನಾದ್ಯಂತ ಈ ಬಾರಿ ಮುಂಗಾರು ಬಿತ್ತನೆ 99.850 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 56927 ಹೆಕ್ಟೇರ್ ಬಿತ್ತನೆಯಾಗಿದೆ. ಇನ್ನೂ 42923 ಹೆಕ್ಟೇರ್ ಕ್ಷೇತ್ರ ಬಿತ್ತನೆ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಅದು ಕೂಡ ಬಿತ್ತನೆಯಾಗಲಿದೆ. ಇಲ್ಲಿಯವರೆಗೆ ಕಬ್ಬು ಸೇರಿದಂತೆ 57 ಪ್ರತಿಶತ ಬಿತ್ತನೆಯಾಗಿದೆ. ಇನ್ನೂ 43 ಪ್ರತಿಶತ ಬಿತ್ತನೆಯಾಗಬೇಕು. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ರೈತರು ನಿರಾತಂಕವಾಗಿ ಬಿತ್ತನೆ ಮಾಡಬಹುದು. 70 ಸಾವಿರ ಹೆಕ್ಟೇರ್ ವರೆಗೂ ಈ ಬಾರಿ ತೊಗರಿ ಬಿತ್ತನೆಯಾಗುವ ನಿರೀಕ್ಷೆ ಇದೆ. –
ಮಹಮದ್ ಖಾಸಿಂ, ಎಡಿ, ಕೃಷಿ ಇಲಾಖೆ
-ಮಲ್ಲಿಕಾರ್ಜುನ ಹಿರೇಮಠ