ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರಗಳ ಕಾಲ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ ತೀವ್ರ ಪ್ರಭಾವ ಪಡೆದುಕೊಂಡ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಒಡಿಶಾದಿಂದ ತಮಿಳಿನಾಡಿನ ವರೆಗೆ ಗಾಳಿ ತೀವ್ರತೆ ವಾತಾವರಣ ಸೃಷ್ಟಿಯಾಗಿದೆ.
ಹೀಗಾಗಿ, ಮೇ 26 ರಿಂದ ಮುಂದಿನ ಒಂದು ವಾರ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಸೋಮವಾರ ಬೆಳಗ್ಗೆ 8.30ರ ಅಂಕಿ ಅಂಶದ ಪ್ರಕಾರ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಮಂಡ್ಯದಲ್ಲಿ 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಂಗಳೂರು ನಗರ, ಹಾಸನ, ಮೈಸೂರಿನಲ್ಲಿ ತಲಾ 3, ಕೃಷ್ಣರಾಜಸಾಗರ, ಬೇಲೂರು, ಚಾಮರಾಜನಗರ, ಶರವಣಬೆಳಗೊಳದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ ಅತಿ ಹೆಚ್ಚು 44.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿರುವುದು ವರದಿಯಾಗಿದೆ.