ತುಮಕೂರು: ತುಮಕೂರು ಮಹಾನಗರಪಾಲಿಕೆಯ 2020-21ನೇ ಸಾಲಿನ ಆಯ-ವ್ಯಯ ಸಭೆಯಲ್ಲಿ 3.81 ಕೋಟಿ ರೂ. ಉಳಿತಾಯ ಬಜೆಟನ್ನು ಹಣಕಾಸು ಮತ್ತು ತೆರಿಗೆ ನಿರ್ಧರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ. ಮಹೇಶ್ ಮಂಡನೆ ಮಾಡಿದ್ದು ಕೋವಿಡ್ 19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡೇ ಹಸಿರು ಬಜೆಟ್ ಘೋಷಣೆಯಡಿಯಲ್ಲಿ ರಾಜ್ಯದಲ್ಲೇ 6ನೇ ಬಾರಿಗೆ ಕಾಗದ ರಹಿತ ಇ-ಬಜೆಟ್ ಮಂಡನೆ ಮಾಡಿದರು.
ಈ ಆಯವ್ಯಯದಲ್ಲಿ ಆರಂಭಿಕ ಶಿಲ್ಕು 2601.45 ಲಕ್ಷ ರೂ. ಸೇರಿ 22804.77ಲಕ್ಷ ರೂ.ಗಳ ಅಂದಾಜು ಸ್ವೀಕೃತಿ ಹಣದಲ್ಲಿ 2020-21 ಸಾಲಿಗಾಗಿ 22,423,37 ಲಕ್ಷ ರೂ. ಗಳ ಅಂದಾಜು ವೆಚ್ಚ ಮಾಡಲು ಬಜೆಟ್ ಮಂಡನೆ ಮಾಡಲಾಗಿದ್ದು, 381.40 ಲಕ್ಷ ರೂ.ಗಳು ಉಳಿತಾಯದಲ್ಲಿದೆ. ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು.
ಈ ವರ್ಷದ ಆಯವ್ಯಯದಲ್ಲಿ ನಗರದ ಜನತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಿಲ್ದಾಣ, ವ್ಯವಸ್ಥಿತವಾದ ಪಾರ್ಕಿಂಗ್, ಸುಸಜ್ಜಿತ ಗ್ರಂಥಾಲಯ ಕಟ್ಟಡ, ಸ್ಮಾರ್ಟ್ ಲಾಂಜ್ ನಿರ್ಮಾಣ, ಪಾರ್ಕ್ ಮತ್ತು ರಸ್ತೆ ನಿರ್ಮಾಣ, ಮಹಾತ್ಮ ಗಾಂಧಿ ಕ್ರೀಡಾಂಗಣ ನವೀಕರಣದೊಂದಿಗೆ ಕುಡಿಯುವ ನೀರು, ಉತ್ತಮ ಆರೋಗ್ಯ, ಸ್ವತ್ಛ ತುಮಕೂರು, ಬೀದಿ ದೀಪ, ಒಳಚರಂಡಿ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿ, ಮತ್ತಿತರ ಸಾರ್ವಜನಿಕ ಸಹಭಾಗಿತ್ವದ ಅಭಿವೃದ್ಧಿ ಕೆಲಸವನ್ನು ಕೈಗೆತ್ತಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಪಾಲಿಕೆಯಿಂದ ಒಟ್ಟು 20203.32ಲಕ್ಷಗಳ ಸ್ವೀಕೃತಿಯನ್ನು ನಿರೀಕ್ಷಿಸಲಾಗಿದ್ದು, ಈ ಪೈಕಿ ಸ್ವಂತ ಸಂಪನ್ಮೂಲಗಳಿಂದ 6150.39ಲಕ್ಷ ರೂ. ಹಾಗೂ ಸರ್ಕಾರದ ಅನುದಾನಗಳಿಂದ 14052.93ಲಕ್ಷ ರೂ.ಗಳನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆಯ ಮೇಯರ್ ಫರೀದಾ ಬೇಗಂ, ಉಪಮಹಾಪೌರರಾದ ಶಶಿಕಲಾ ಗಂಗಹನುಮಯ್ಯ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಪಾಲಿಕೆ ಎಲ್ಲಾ ವಾರ್ಡ್‌ಗಳ ಸದಸ್ಯರು ಇದ್ದರು.