ಶಿರಸಿ: ಕಾಡಿನ ನಡುವಿನ ಹಳ್ಳಿಯಲ್ಲಿ ಇದ್ದು ಬ್ರಾಹ್ಮೀ ಮಾಲ್ಟ್ ಸಿದ್ದಗೊಳಿಸಿ ಪೇಟೆಯ ಮಾರುಕಟ್ಟೆಗೆ ಕಳಿಸುತ್ತಿದ್ದ ಘಟಕಕ್ಕೆ ಈಗ ಇನ್ನಷ್ಟು ಶಕ್ತಿ ಲಭಿಸಿದೆ. ಸೆಲ್ಕೋ ಸೋಲಾರ್ ಸಂಸ್ಥೆ ಈಗ ನೇರವಾಗಿ ಸೂರ್ಯನಿಗೇ ಪ್ಲಗ್ ಹಾಕಿಸಿ ಗ್ರಹೋದ್ಯಮಕ್ಕೆ ಪವರ್ ಕೊಟ್ಟಿದೆ.
ತಾಲೂಕಿನ ರಾಗಿಹೊಸಳ್ಳಿಯ ಹೊಸೂರಿನ ಗಂಗಾ ಸೀತಾರಾಮ್ ಹೆಗಡೆ ಅವರ ಬ್ರಾಹ್ಮಿ ಮಾಲ್ಟ್ ತಯಾರಿಸುವ ಘಟಕಕ್ಕೆ ಸೆಲ್ಕೋ ಸಂಸ್ಥೆ ವತಿಯಿಂದ ಹಿಟ್ಟಿನ ಗಿರಣಿ, ಸಿರಿಧಾನ್ಯ ಹುರಿಯುವ ಯಂತ್ರ, ಪ್ಯಾಕಿಂಗ್ ಯಂತ್ರ ಹಾಗೂ ಬಾಳೆಕಾಯಿ ಕತ್ತರಿಸುವ ಯಂತ್ರಕ್ಕೆ ಸೌರ ವಿದ್ಯುತ್ ಶಕ್ತಿಯನ್ನು ಅಳವಡಿಸಿ ವಿದ್ಯುತ್ ಇಲ್ಲದೇ ಇದ್ದಾಗಲೂ ಸೂರ್ಯನ ಪವರ್ ಬೆಳಕಾಗಿಸುವ, ಶಕ್ತಿಯಾಗಿಸುವ ಕಾರ್ಯ ಮಾಡಲಿದೆ.
ಈ ನೂತನ ಸೋಲಾರ್ ಪವರ್ ಘಟಕದ ಉದ್ಘಾಟನೆಯನ್ನು ಸಂಸ್ಥೆಯ ಸೆಲ್ಕೋದ ಉಪ ಮಹಾಪ್ರಬಂಧಕ ಪ್ರಸನ್ನ ಹೆಗಡೆ ನೆರವೇರಿಸಿ ಮಾತನಾಡಿ, ಸುಮಾರು ನಾಲ್ಕು ಲಕ್ಷದ ಎಪ್ಪತ್ತು ಸಾವಿರ ವೆಚ್ಚದಲ್ಲಿ ಎಲ್ಲ ಯಂತ್ರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸೌರಶಕ್ತಿಯ ಮೂಲಕ ಇಂಧನವನ್ನ ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಇಂತಹ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ವಿದ್ಯುತ್ ಶಕ್ತಿಯ ಅವಲಂಬನೆ ಇಲ್ಲದೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸೌರ ವಿದ್ಯುತ್ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸೆಲ್ಕೋ ದ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ್ ಭಾಗವತ್ ಮಾತನಾಡಿ, ಮಹಿಳೆಯರು ನಡೆಸುವ ಆರೋಗ್ಯ ವರ್ಧಕ ಬ್ರಾಹ್ಮೀ ಘಟಕದಲ್ಲಿನ ಕೆಲಸ ಸುಲಭಗೊಳಿಸಲು ಸೆಲ್ಕೋ ನೆರವಾಗಿರುವುದ ಬಗ್ಗೆ ಖುಷಿ ಇದೆ. ಸಿರಿಧಾನ್ಯ ಆಹಾರ ತಯಾರಿಸುವ ಗ್ರಾಮೀಣ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಗೂ ನವೀಕರಿಸಬಹುದಾದ ಇಂಧನವನ್ನು ಬಳಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದರು.
ಸೆಲ್ಕೋ ಫೌಂಡೇಶನ್ ಅಧಿಕಾರಿ ವೀರೇಶ್, ವಲಯ ವ್ಯವಸ್ಥಾಪಕ ದತ್ತಾತ್ರೇಯ ಹೆಗಡೆ, ಶಿರಸಿ ಶಾಖೆಯ ವ್ಯವಸ್ಥಾಪಕ ಸುಬ್ರಾಯ ಹೆಗಡೆ ಹಾಗೂ ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸೆಲ್ಕೋ ಕೇವಲ ಒಂದು ಉದ್ದಿಮೆ ಆಗದೇ ಬೆಳಕಿನ ಜೊತೆ ಮಹಿಳಾ ಉದ್ದಿಮೆಗಳಿಗೆ ಶಕ್ತಿಯನ್ನೂ ಕೊಡುವ ಕೆಲಸ ಮಾಡುತ್ತಿದೆ. –
ಗಂಗಾ ಹೆಗಡೆ, ಫಲಾನುಭವಿ
ಕಾಡಿನಂಚಿನ ಊರಿನ ಒಂದು ದೇಸೀ ಉತ್ಪನ್ನದ ಉದ್ದಿಮೆಗೆ ವಿಸ್ತಾರಕ್ಕೆ ಸಂಸ್ಥೆಗಳು ನೆರವಾಗುವುದು ಸಾಮಾಜಿಕ ಜವಾಬ್ದಾರಿ ಕೂಡ ಹೌದು. –
ಪ್ರಸನ್ನ ಹೆಗಡೆ, ಉಪ ಮಹಾಪ್ರಬಂಧಕ, ಸೆಲ್ಕೋ