ಪಣಜಿ: ಕೋವಿಡ್ ನಿಂದಾಗಿ ಕಳೆದ ಎರಡು ಪ್ರವಾಸೋದ್ಯಮ ಋತುಗಳು ವ್ಯರ್ಥವಾದ ನಂತರ, ಈ ವರ್ಷ ಕ್ರಿಸ್‍ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಲಕ್ಷಾಂತರ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಗೋವಾ ರಾಜ್ಯಕ್ಕೆ ಆಗಮಿಸಿದ್ದಾರೆ.
ಪ್ರಸ್ತುತ, ಹೋಟೆಲ್‍ಗಳು ಶೇಕಡಾ 90 ಕ್ಕಿಂತ ಹೆಚ್ಚು ಭರ್ತಿಯಾಗಿದೆ ಮತ್ತು ಡಿಸೆಂಬರ್ 27 ಮತ್ತು 31 ರ ನಡುವೆ ಸಂಪೂರ್ಣವಾಗಿ ಫುಲ್ ಆಗುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ. ಈ ಅವಧಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಿಂದಾಗಿ ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ.
ಕಳೆದ ಎರಡು ವರ್ಷಗಳಿಂದ, ಕೋವಿಡ್ ನಿರ್ಬಂಧದಿಂದಾಗಿ ಅಂತರರಾಷ್ಟ್ರೀಯ ಪ್ರವಾಸಿಗರು ಗೋವಾಕ್ಕೆ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ, ರಾಜ್ಯದ ಪ್ರವಾಸೋದ್ಯಮವು ಕಳೆದ ಎರಡು ವರ್ಷ ಕೇವಲ ದೇಶೀಯ ಪ್ರವಾಸಿಗರನ್ನು ಅವಲಂಬಿಸಬೇಕಾಯಿತು. ಆದರೆ, ಇದೀಗ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಎಲ್ಲ ನಿರ್ಬಂಧಗಳನ್ನು ತೆಗೆದು ಮೊದಲಿನಂತೆ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲಾಗಿದೆ. ಇದರಿಂದಾಗಿ ವಿದೇಶಿ ಪ್ರವಾಸಿಗರನ್ನು ಹೊತ್ತು ಪ್ರತಿವಾರ 14ರಿಂದ 15 ಚಾರ್ಟರ್ ವಿಮಾನಗಳು ಗೋವಾಕ್ಕೆ ಬರುತ್ತಿವೆ. ಹೋಟೆಲ್, ವಿಮಾನ ಪ್ರಯಾಣದ ವೆಚ್ಚ ಹೆಚ್ಚಾದರೂ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. 2023 ಪ್ರವಾಸೋದ್ಯಮ ವರ್ಷವಾಗಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಅಭಿಪ್ರಾಯಪಟ್ಟಿದೆ.
ಸದ್ಯ ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗೋವಾಕ್ಕೆ ಈಗಾಗಲೇ ಹೆಚ್ಚಿನ ಸಮಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ದೇಶೀಯ ಪ್ರವಾಸಿಗರು ಹೆಚ್ಚಾಗಿ ತಮ್ಮ ಸ್ವಂತ ವಾಹನಗಳಲ್ಲಿಯೇ ಗೋವಾಕ್ಕೆ ಆಗಮಿಸುತ್ತಿರುವುದರಿಂದ ಗೋವಾದಲ್ಲಿ ಸದ್ಯ ಭಾರಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ರಾಜ್ಯದ ಪ್ರಮುಖ ರಸ್ತೆಗಳು ದಿನವಿಡೀ ಟ್ರಾಫಿಕ್ ಜಾಮ್‍ನಿಂದ ಕೂಡಿರುವ ದೃಶ್ಯ ಸದ್ಯ ಸರ್ವೇ ಸಾಮಾನ್ಯವಾಗಿದೆ.
ಇದನ್ನೂ ಓದಿ: ಆರೋಗ್ಯದ ಬಗ್ಗೆ ಕಾಳಜಿ ಇರಲಿ; ಕುತ್ತಿಗೆ ಸುತ್ತ ಕಪ್ಪಾಗಿದ್ದರೆ, ಈ ಟಿಪ್ಸ್ ಅನುಸರಿಸಿ