Advertisement
ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ ಕೊಡಗು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪ್ರವಾಹದಿಂದ 3,705.87 ಕೋಟಿ ರೂ. ನಷ್ಟವಾಗಿದ್ದರೆ, ಬರಗಾಲದಿಂದಾಗಿ 89 ತಾಲೂಕುಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಒಣಗಿ 8,000 ಕೋಟಿ ರೂ.ಗಿಂತಲೂ ಅಧಿಕ ನಷ್ಟವಾಗಿದೆ. ಪ್ರಕೃತಿ ವಿಕೋಪ ಪರಿಹಾರ ಕೋರಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸಲ್ಲಿಸಲಾಗಿರುವ ಮನವಿಯಲ್ಲಿ ಈ ಮಾಹಿತಿ ನೀಡಲಾಗಿದೆ.
Related Articles
Advertisement
ವಿವರವಾದ ಪ್ರಸ್ತಾವನೆ:ಕರ್ನಾಟಕದ ಒಳನಾಡಿನ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ಸಹ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದೆ. ಆರಂಭಿಕ ಮಾಹಿತಿ ಪ್ರಕಾರ 8,000 ಕೋಟಿ ರೂ. ನಷ್ಟ ಎಂದು ಅಂದಾಜಿಸಲಾಗಿದ್ದು, ಈ ಕುರಿತು ಮಂಗಳವಾರ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವನೆ ಅಂತಿಮಗೊಳಿಸಲಾಗುವುದು. ಬಳಿಕ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನಿಯವರಿಗೆ ಮಾಹಿತಿ ನೀಡಿದೆ. 89 ತಾಲೂಕು ಬರಪೀಡಿತ: ಇಂದು ಘೋಷಣೆ ಸಾಧ್ಯತೆ
ಮಳೆ ಕೊರತೆ, ತೇವಾಂಶವಿಲ್ಲದೆ ಬೆಳೆ ನಷ್ಟ ಸಂಭವಿಸಿರುವ ರಾಜ್ಯದ 16 ಜಿಲ್ಲೆಗಳ 89 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಮಂಗಳವಾರ ಸಂಪುಟ ಉಪಸಮಿತಿ ಸಭೆ ಬಳಿಕ ಈ ತಾಲೂಕುಗಳ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಬರ ನಿರ್ವಹಣೆ ಕೈಪಿಡಿ- 2016ರಲ್ಲಿ ನಿಗದಿಪಡಿಸಿರುವ ಮಾನದಂಡದಂತೆ ಒಟ್ಟು 176 ತಾಲೂಕುಗಳ ಪೈಕಿ 89 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ಪಟ್ಟಿ ಮಾಡಲಾಗಿದೆ. ಸಂಬಂಧಿಸಿದ ಇಲಾಖೆಗಳು ಬರ ಪರಿಸ್ಥಿತಿಯ ತೀವ್ರತೆ ಮತ್ತು ಬೆಳೆನಾಶದ ಪ್ರಮಾಣ ಖಾತರಿಪಡಿಸಲು ಸಮೀಕ್ಷೆ ನಡೆಸುತ್ತಿವೆ. ಮಂಗಳವಾರ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಅನುಮೋದನೆ ನೀಡಿ ಪ್ರಕಟಿಸುವ ಸಾಧ್ಯತೆಗಳಿವೆ. ಸಂಪುಟ ಉಪಸಮಿತಿ ಅನುಮೋದನೆ ಬಳಿಕವೇ ಬರಪೀಡಿತ ತಾಲೂಕುಗಳು ಯಾವುವು ಎಂಬುದು ಅಂತಿಮಗೊಳ್ಳಲಿದೆ. ಇದಾದ ಬಳಿಕ ಕೇಂದ್ರ ವಿಕೋಪ ಪರಿಹಾರ ನಿಧಿಯಿಂದ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.