ಚನ್ನರಾಯಪಟ್ಟಣ: ಹಾಸನ ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರದಲ್ಲಿ ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ತಾಲೂಕಿನ ಶ್ರವಣೇರಿ ಬಳಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 2.5 ಕಿ.ಮೀ. ಡಾಂಬರು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರ ವೇರಿಸಿ ಮಾತನಾಡಿ, ಮೊದಲ ಸುತ್ತಿನಲ್ಲಿ10ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ವಿವಿಧ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಎರಡನೇ ಸುತ್ತಿನಲ್ಲಿ 15ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಇರುವ ಕಡೆ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
6 ಕಿ.ಮೀ. ರಸ್ತೆ ಅಭಿವೃದ್ಧಿ: 1.17 ಕೋಟಿ ರೂ.ನಲ್ಲಿ ಜನಿವಾರ ಕೆರೆ ಕೋಡಿಯಿಂದ ಶ್ರವಣೇರಿ, ಹಿರೀ ಬಿಳ್ತಿ ರಸ್ತೆ ಅಭಿವೃದ್ಧಿ ಮಾಡಿಸಲಾಗುತ್ತಿದೆ. 5.39 ಕೋಟಿ ರೂ. ನಲ್ಲಿ ಶ್ರವಣಬೆಳಗೊಳ ಹೋಬಳಿ ಬೆಕ್ಕ ಗ್ರಾಮದಿಂದ ಶಿವಪುರ, ಬಿ.ಹೊನ್ನೇನಹಳ್ಳಿ, ಪರಮ, ಸೋರೇಹಳ್ಳಿಯ 5.9 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಬಾಗೂರು ಹೋಬಳಿ ಅಣತಿಗ್ರಾಮದಿಂದ ಬೈರಾಪುರ ಮಾರ್ಗವಾಗಿ ಕಾರೇಹಳ್ಳಿ ರಸ್ತೆವರೆಗೆ 3.36 ಕೋಟಿ ರೂ.ನಲ್ಲಿ 6 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೆಚ್ಚು ಅನುದಾನ ನೀಡಲಿ: ಸಂಸದರ ವೇತನಸಂಪೂರ್ಣ ನಿಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಮೋದಿ ಸರ್ಕಾರ ಮುಂದಾಗ ಬೇಕು, ಅನುದಾನ ನೀಡದೆ ಹೋದರೆ ಕ್ಷೇತ್ರದ ಪ್ರಗತಿ ಕುಂಟಿತವಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಅನುದಾನ ತಂದು ಜಿಲ್ಲೆ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ಸಮುದಾಯ ಭವನಕ್ಕೆ ಹಣ ಕೊಡಿ: ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಮೈತ್ರಿ ಸರ್ಕಾರದ ವೇಳೆ ತಾಲೂಕಿನಲ್ಲಿ 400 ಕಿ.ಮೀ.ರಸ್ತೆ ಡಾಂಬರೀ ಕರಣ ಮಾಡಲಾಗಿದೆ, ಇನ್ನು ಸಂಸದರ ನಿಧಿಯಿಂದ ಹೆಚ್ಚು ಅನುದಾನ ತಂದು ಅಭಿವೃದ್ಧಿ ಮಾಡಿಸಲಾಗುತ್ತಿದೆ. ಸಂಸದರು ಕ್ಷೇತ್ರದಲ್ಲಿ ಹಲವು ವರ್ಷದಿಂದ ಅರ್ಧಕ್ಕೆ ನಿಂತಿರುವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ, ತಾಲೂಕು ಅರ್ಚಕ ಸಂಘದ ಅಧ್ಯಕ್ಷ ಶ್ರೀಧರ ಮೂರ್ತಿ, ಮುಖಂಡರಾದ ಪರಮಕೃಷ್ಣೇಗೌಡ, ಎಚ್.ಎನ್.ಲೋಕೇಶ್, ರಮೇಶ್, ಲವಣ್ಣ, ತಹಶೀಲ್ದಾರ್ ಜೆ.ಮಾರುತಿಗೌಡ, ತಾಪಂ ಇಒ ಸುನಿಲ್ ಕುಮಾರ್ ಉಪಸ್ಥಿತರಿದ್ದರು.