ಚಿತ್ರದುರ್ಗ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆ ಆದ ಮೇಲೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ ಶಕ್ತಿ ತುಂಬಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಅನುದಾನ ನೀಡುವುದರ ಜೊತೆಯಲ್ಲಿ ಇದಕ್ಕೆ ಪೂರಕ ಎನ್ನುವಂತೆ ಕ್ರೀಡಾಪಟು ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಮತ್ತು ಯುವಜನ ಇಲಾಖೆಯ ಜವಾಬ್ದಾರಿ ನೀಡುವ ಮೂಲಕ ಕ್ಷೇತ್ರದ ಏಳ್ಗೆಗೆ ಅನುಕೂಲ ಮಾಡಲಾಗಿದೆ. ಯಾವುದೇ ಕ್ಷೇತ್ರದಲ್ಲಿ ತಿಳಿದವರಿಗೆ ಹೊಣೆ ನೀಡಿದಾಗ ಮಾತ್ರ ಸಾಧನೆ ಸಾಧ್ಯ. ಮುಂಬರುವ ದಿನಗಳಲ್ಲಿ ಒಲಂಪಿಕ್ಸ್ ಗೇಮ್‌ನಲ್ಲಿ ಭಾರತ ಸಾಧನೆ ಮಾಡುವ ಸೂಚನೆ ಸ್ಪಷ್ಟವಾಗುತ್ತಿದೆ ಎಂದರು.
ಕೇಂದ್ರಸರ್ಕಾರವು ಅವಕಾಶ ವಂಚಿತ ಕ್ರೀಡಾ ಪಟುಗಳು, ಸಾಂಸ್ಕೃತಿಕ ಪ್ರತಿಭೆ ಗುರುತಿಸಲು ಪ್ರತ್ಯೇಕ ಆಪ್ ಅಭಿವೃದ್ಧಿ ಪಡಿಸಿದೆ. ಉತ್ತಮ ಸಾಧನೆ ಮಾಡಬೇಕು ಎನ್ನುವವರಿಗೆ ಬೆಂಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ರೀಡೆಗಳು ಎಂದರೆ ಕ್ರಿಕೆಟ್, ಟೆನ್ನಿಸ್, ಬ್ಯಾಡ್ಮಿಂಟನ್ ಮಾತ್ರ ಎನ್ನುವಂತಾಗಿರುವುದು ಬೇಸರದ ಸಂಗತಿ. ಆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಿ. ಆದರೆ, ಗ್ರಾಮೀಣ ಕ್ರೀಡೆಗಳನ್ನು ಕಡೆಗಣಿಸುತ್ತಿರುವುದು ಎಷ್ಟು ನ್ಯಾಯ ಎಂದು ಪ್ರಶ್ನಿಸಿದ ಅವರು ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಭಾರತ ದೇಶದ ಜನಸಂಖ್ಯೆ ವಿಶ್ವ ಮಟ್ಟದಲ್ಲಿ 2ನೇ ಸ್ಥಾನ ಪಡೆದಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಪ್ರಾಥಮಿಕ, ಪ್ರೌಢಶಾಲಾ ಹಂತದಲ್ಲೇ ದೈಹಿಕ ಶಿಕ್ಷಕರ ನೇಮಕ ಮಾಡಬೇಕು ಎಂದರು. ಕ್ರೀಡೆಗಳಿಗೆ ಜನಪ್ರತಿನಿಗಳು, ಕ್ರೀಡಾಸಕ್ತರ ಪ್ರೋತ್ಸಾಹದ ಕೊರತೆಯೇ ಬಹುಮುಖ್ಯ ಕಾರಣ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಪ್ರೋತ್ಸಾಹಿಸಿದಾಗ ಮಾತ್ರ ಬಲಿಷ್ಠ ಕ್ರೀಡಾಪಟುಗಳನ್ನು ರೂಪಿಸಿ ಒಲಿಂಪಿಕ್‌ನಲ್ಲಿ ಪದಕ ಗೆಲ್ಲಲು ಸಾಧ್ಯ ಎಂದು ಹೇಳಿದರು.
ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಾನ ಮಸ್ಥಿತಿಯಲ್ಲಿರಬೇಕು. ಕ್ರೀಡೆಗಳಲ್ಲಿ ಸೋತರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಫಲರಾದರೆ ಯಾವ ಕಾರಣಕ್ಕೂ ಕುಗ್ಗಬೇಡಿ. ಧೈರ್ಯವಿದ್ದರೆ, ಜೀವನದಲ್ಲಿ ಎಂತಹ ಕಷ್ಟ ಬಂದರೂ ಸಹ ಮೆಟ್ಟಿ ನಿಂತು ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಬಾಪೂಜಿ, ಡಾನ್‌ಬಾಸ್ಕೋ, ಮಹೇಶ್ ಪಿಯು ಕಾಲೇಜು, ಕಂಪಳರಂಗ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಿಯು ಡಿಡಿ ಟಿ.ತಿಮ್ಮರಾಯಪ್ಪ, ಕಂಪಳರಂಗ ಕಾಲೇಜು ಕಾರ್ಯದರ್ಶಿ ಓ.ಪಾಲಮ್ಮ, ಮಹೇಶ್ ಕಾಲೇಜು ಸುರೇಶ್ ಬಾಸ್ರಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ. ವೀರಭದ್ರಪ್ಪ, ಕಾರ್ಯದರ್ಶಿ ಡಾ| ಪಿ. ಶಿವಲಿಂಗಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಲಕ್ಷ್ಮಣ್, ಜಿ.ಎಸ್. ತಿಪ್ಪೇಸ್ವಾಮಿ, ಕೆ.ಮಧುಸೂದನ್, ಯಶವಂತ್ ಶೆಟ್ಟಿ ಉಪಸ್ಥಿತರಿದ್ದರು.