Advertisement

ಮುಂದಿನ ವರ್ಷದಿಂದ ಇನ್ನಷ್ಟು ಆಂಗ್ಲ ಮಾಧ್ಯಮ ತರಗತಿ

11:41 PM Jun 14, 2019 | Lakshmi GovindaRaj |

ಬೆಂಗಳೂರು: ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಿ ಆರಂಭಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇನ್ನಷ್ಟು ತರಗತಿಗಳನ್ನು ತೆರೆಯಲು ಸಮ್ಮಿಶ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಹಾಗೂ 100 ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ನಾಡಿನ ಸಾಮಾನ್ಯ ಪ್ರಜೆಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಇದಕ್ಕಾಗಿ ಆಂಗ್ಲ ಮಾಧ್ಯಮದ ಅನಿವಾರ್ಯತೆ ಇದೆ. ನಮ್ಮ ಭಾಷೆ ಉಳಿಸುವ ಜತೆಗೆ ನಾಡಿನ ಯುವ ಪೀಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಅಗತ್ಯವಿರುವ ಇಂಗ್ಲಿಷ್‌ ಕೂಡ ಕಲಿಸುತ್ತಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚೆಚ್ಚು ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯಲಿದ್ದೇವೆ ಎಂದು ಭರವಸೆ ನೀಡಿದರು.

ಸರ್ಕಾರಿ ಆಂಗ್ಲ ಮಾಧ್ಯಮ ತೆರೆಯುವ ಮೂಲಕ ನಾಡಿನ ಬಹುತೇಕರು ಎದುರಿಸುತ್ತಿರುವ ಕೊರತೆಯನ್ನು ಪೂರ್ಣಗೊಳಿಸುತ್ತಿದ್ದೇವೆ. ಇಂಗ್ಲಿಷ್‌ ಮಾಧ್ಯಮ ತೆರೆಯುವಾಗ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪ ಹಾಗೂ ಆತಂಕ ಎದುರಾಗಿತ್ತು. ಕೆಲವು ಸಾಹಿತಿಗಳು, ಕನ್ನಡ ಪರ ಹೋರಾಟಗಾರರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದರು.

ನಾವ್ಯಾರೂ ಕನ್ನಡ ವಿರೋಧಿಗಳಲ್ಲ, ಕನ್ನಡ ಉಳಿಸಲು ಬದ್ಧವಾಗಿದ್ದೇವೆ. ಸರ್ಕಾರಿ ವಸತಿ ಶಾಲೆಗಳಿಗೆ ಕಾಯಕಲ್ಪ ನೀಡುತ್ತಿದ್ದೇವೆ. ಶಾಲೆಗೆ ಹೋಗುವ ಮಕ್ಕಳ ಅನುಕೂಲಕ್ಕಾಗಿ ಮಲೆನಾಡು-ಕರಾವಳಿ ಭಾಗದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಕಾಲುಸಂಕ ನಿರ್ಮಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

Advertisement

ರಾಜಕೀಯ ಬೆಳವಣಿಗೆಯಿಂದ ಸಚಿವ ಎನ್‌.ಮಹೇಶ್‌ ಅವರು ರಾಜೀನಾಮೆ ನೀಡಿದ ನಂತರ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ನನ್ನಲ್ಲೇ ಉಳಿದಿದೆ. ಆದರೆ, ಶಿಕ್ಷಣ ಇಲಾಖೆಗೆ ಎಲ್ಲ ರೀತಿಯ ಸೌಲಭ್ಯ ನೀಡುವ ಕಾರ್ಯ ಮಾಡಿದ್ದೇವೆ ಎಂದರು.

ಕನ್ನಡ ನಿರ್ಲಕ್ಷಿಸಿಲ್ಲ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯುತ್ತಿರುವುದರಿಂದ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಯಾರೂ ಭಾವಿಸಬಾರದು. ಮಾತೃಭಾಷೆಯ ರಕ್ಷಣೆ ಜತೆಗೆ ಸರ್ಕಾರಿ ಶಾಲೆಯಲ್ಲೂ ಆಂಗ್ಲ ಮಾಧ್ಯಮ ತೆರೆಯುವುದರಿಂದ ಬಡ ಮತ್ತು ಮಧ್ಯಮ ಕುಟುಂಬಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದರು.

ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಾಂಕೇತಿಕವಾಗಿ ಬ್ಯಾಗ್‌ ಸಹಿತವಾದ ಸ್ಕೂಲ್‌ ಕಿಟ್‌, ಆಂಗ್ಲ ಮಾಧ್ಯಮದ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಉತ್ತಮ ಕ್ರಿಯಾ ಯೋಜನೆ ಸಿದ್ಧಪಡಿಸಿರುವ ಶಾಲೆಗೆ ಮುಖ್ಯಮಂತ್ರಿಯವರು ಬಹುಮಾನ ವಿತರಿಸಿದರು.

ಸಚಿವ ಸಾ.ರಾ.ಮಹೇಶ್‌, ಶಾಸಕ ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರೆಡ್ಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಪಿ.ಸಿ.ಜಾಫ‌ರ್‌, ಸರ್ವಶಿಕ್ಷಾ ಅಭಿಯಾನದ ನಿರ್ದೇಶಕ ಟಿ.ಎಂ.ರೆಜು ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next