ಬೆಂಗಳೂರು: ಕೇಂದ್ರ ಸರಕಾರ ಅಂಚೆ ಇಲಾಖೆ ಉನ್ನತೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪ್ರಸ್ತುತ ಗ್ರಾಮೀಣ ಭಾಗ ಮಾತ್ರವಲ್ಲದೆ ನಗರದಲ್ಲಿ ಇಲಾಖೆ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂದು ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ತಿಳಿಸಿದರು.
ರಾಷ್ಟ್ರೀಯ ಅಂಚೆ ಸಪ್ತಾಹ ಅಂಗವಾಗಿ ಜಿಪಿಒ ಕಚೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇಲಾಖೆ ಸಿಬಂದಿಗೆ ಮೇಘದೂತ್ ಮತ್ತು ಅತ್ಯುತ್ತಮ ಪ್ರಶಸ್ತಿಯನ್ನು ಪ್ರದಾನಿಸಿ ಮಾತನಾಡಿದರು. ಸುಕನ್ಯಾ ಸಮೃದ್ಧಿ ಯೋಜನೆಯಡಿ ರಾಜ್ಯದಲ್ಲಿ ಬಿಪಿಎಲ್ ಕುಟುಂಬಗಳ ಹೆಣ್ಣು ಮಕ್ಕಳನ್ನು ದಾಖಲಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಹಯೋಗದೊಂದಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಗುತ್ಛದ ಮೂಲಕ ಆರ್ಥಿಕ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಹೂಡಿಕೆ ಯೋಜನೆ ಆಯ್ಕೆಗಳ ಶ್ರೇಣಿಗೆ ಪಿಒಎಸ್‌ಬಿ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದೆ. ಹಿಂದಿನ ಬಜೆಟ್‌ನಲ್ಲಿ ಘೋಷಿಸಲ್ಪಟ್ಟ ಮಹಿಳಾ ಸಮ್ಮಾನ್ ಪ್ರಮಾಣ ಪತ್ರಗಳು, ಉತ್ತಮ ಪ್ರತಿಕ್ರಿಯೆಯನ್ನು ಪಡೆದಿವೆ ಎಂದು ವಿವರಿಸಿದರು.
ಸಾಮಾಜಿಕ ಜಾಗೃತಿಯನ್ನು ಗಮನದಲ್ಲಿಟ್ಟುಕೊಂಡು ಅಂಚೆ ಚೀಟಿಗಳ ಸಂಗ್ರಹಣೆಯ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ವಿಭಿನ್ನ ವಿಷಯಗಳು, ವ್ಯಕ್ತಿತ್ವಗಳ ಮೇಲೆ 25 ವಿಶೇಷ ಕವರ್‌ಗಳು, 24 ವಿಶೇಷ ರದ್ದತಿಗಳು ಮತ್ತು ಕೆಎಎಸ್ ಅಧಿಕಾರಿಗಳ ಸಂಘದ ಕಾರ್ಪೊರೇಟ್ ಮೈಸ್‌ಟ್ಯಾಂಪ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ನೇರ ಲಾಭ ವರ್ಗಾವಣೆ, ಸಾಮಾಜಿಕ ಭದ್ರತಾ ಪಿಂಚಣಿಗಳು, ಜನ ಸುರಕ್ಷಾ ಯೋಜನೆಗಳು , ಸುಕನ್ಯಾ ಸಮೃದ್ಧಿ ಖಾತೆಗಳು, ಎಇಪಿಎಸ್ ಮತ್ತು ಅಂಚೆ ಇಲಾಖೆಯ ಇತರ ಉತ್ಪನ್ನಗಳು ಮತ್ತು ಸೇವೆಗಳ ಲಭ್ಯತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಡಿಜಿಟಲ್ ಪಾವತಿ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಮತ್ತು ಆನ್‌ಲೈನ್ ವಂಚನೆಗಳನ್ನು ತಪ್ಪಿಸಲು ಗ್ರಾಮೀಣ, ದೂರದ ಪ್ರದೇಶಗಳು, ನಗರ ಕೊಳೆಗೈರಿಗಳು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಮೇಘದೂತ್ ಪ್ರಶಸ್ತಿ ವೃತ್ತಕಚೇರಿಯ ಎಲ್‌ಎಸ್‌ಜಿ ಮುಖ್ಯಸ್ಥ ರಮೇಶ್ ಬಾಬು, ಮೈಸೂರು ವಿಭಾಗ ಸಹಾಯಕ ಮುಖ್ಯಸ್ಥ ವಿನಾಯಕ್ ಎಸ್. ಶೆಟ್ಟಿ ಹಾಗೂ ಅತ್ಯುತ್ತಮ ಸೇವಾ ಸಿಬಂದಿ ಪ್ರಶಸ್ತಿಯನ್ನು 29 ಮಂದಿಗೆ ಪ್ರದಾನ ಮಾಡಲಾಯಿತು.