Advertisement

ಚಾಮರಾಜನಗರದ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು

02:50 PM Mar 01, 2023 | Team Udayavani |

ಚಾಮರಾಜನಗರ: ಚಾಮರಾಜನಗರ ನಗರಸಭೆಯ 2023-24ನೇ ಸಾಲಿಗೆ ಅಧ್ಯಕ್ಷೆ ಸಿ.ಎಂ.ಆಶಾ ಮಂಗಳವಾರ 1.19 ಕೋಟಿ ರೂ.ಗಳ ಉಳಿತಾಯ ಬಜೆಟ್‌ ಮಂಡಿಸಿದರು.

Advertisement

ನಗರದ ನಗರಸಭಾ ಕಚೇರಿ ಸಭಾಂಗಣದಲ್ಲಿ 2023-24ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಅಧ್ಯಕ್ಷರು ಬಜೆಟ್‌ ಮಂಡಿಸಿದರು. 52.86 ಕೋಟಿ ರೂ. ಮೀಸಲು: ಕಳೆದ ವರ್ಷದ ಉಳಿತಾಯದ 16.34 ಕೋಟಿ ರೂ.ಆರಂಭಿಕ ಶಿಲ್ಕು, 14.93 ಕೋಟಿ ರೂ. ನಗರಸಭೆಯ ಸ್ವಂತ ಸಂಪನ್ಮೂಲಗಳಿಂದ ನಿರೀಕ್ಷಿತ ಆದಾಯ ಹಾಗೂ ಸರ್ಕಾರದಿಂದ ನಿರೀಕ್ಷಿತ ಅನುದಾನಗಳು 22.76 ಕೋಟಿ ರೂ. ಸೇರಿ ಒಟ್ಟು 54.05 ಕೋಟಿ ರೂ. ಗಳಲ್ಲಿ ಹಿಂದಿನ ಸಾಲಿನ ಮುಂದುವರಿದ ಕಾಮಗಾರಿಗಳು ಸೇರಿದಂತೆ 2023-24ನೇ ಸಾಲಿನ ನಿರ್ವಹಣಾ ವೆಚ್ಚ ಮತ್ತು ಬಂಡವಾಳ ಕಾಮಗಾರಿಗಳಿಗೆ ಒಟ್ಟಾರೆ 52.86 ಕೋಟಿ ರೂ. ಮೀಸಲಿರಿಸಲಾಗಿದೆ ಎಂದರು.

395 ಲಕ್ಷ ರೂ. ಮೀಸಲು: 2023-24ನೇ ಸಾಲಿಗೆ ನಗರಸಭೆಯ ಸ್ವಂತ ಮೂಲಗಳಿಂದ 1493 ಲಕ್ಷ ರೂ.ಗಳ ಆದಾಯವನ್ನು ಕ್ರೂಢೀಕರಿಸಲು ಉದ್ದೇಶಿಸಲಾಗಿದೆ. ಇದೇ ಸಾಲಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ 3770 ಲಕ್ಷ ರೂ.ಗಳ ಅನುದಾನವನ್ನು ನಿರೀಕ್ಷಿಸಲಾಗಿದೆ. 15ನೇ ಹಣಕಾಸು ಅನುದಾನದಲ್ಲಿ 395 ಲಕ್ಷ ರೂ.ಗಳನ್ನು ಮೂಲಭೂತ ಸೌಕರ್ಯಕ್ಕಾಗಿ ಕಾಯ್ದಿರಿಸಲಾಗಿದ್ದು ಸದರಿ ಅನುದಾನದಲ್ಲಿ ನೀರು ಸರಬರಾಜು ಕಾಮಗಾರಿಗಳಿಗಾಗಿ 118 ಲಕ್ಷ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣಾ ಕಾಮಗಾರಿಗಳಿಗಾಗಿ 118 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದ್ದು ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಕರ್ಯಗಳಿಗಾಗಿ 158 ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದರು.

ರಸ್ತೆಗಳಿಗೆ ನಾಮಫ‌ಲಕ ಅಳವಡಿಕೆ: ನಗರಸಭಾ ನಿಧಿಯಿಂದ ತುರ್ತಾಗಿ ಆಗಬೇಕಾದ ಕಾಮಗಾರಿಗಳಿಗಾಗಿ 75 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ರಸ್ತೆಗಳಿಗೆ ನಾಮಫ‌ಲಕ ಅಳವಡಿಸಲು ನಗರಸಭಾ ನಿಧಿಯಿಂದ 40 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಎಸ್ಸಿ, ಎಸ್ಟಿ ಕಲ್ಯಾಣಕ್ಕಾಗಿ ಎಸ್‌ಎಫ್ಸಿ ಮುಕ್ತನಿಧಿ ಅನುದಾನದಿಂದ 45 ಲಕ್ಷ ಮತ್ತು ನಗರಸಭಾ ನಿಧಿಯಿಂದ 27.97 ಲಕ್ಷ ಸೇರಿ ಒಟ್ಟು 72.97 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಸದರಿ ಅನುದಾನದಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕಾಗಿ 14.60 ಲಕ್ಷ, ಪರಿಶಿಷ್ಟ ಸಮುದಾಯದ ಕಾರ್ಯಕ್ರಮಗಳಿಗಾಗಿ 24.91 ಲಕ್ಷ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ 16.60 ಲಕ್ಷ ರೂ. ಗಳು ಮೀಸಲಿರಿಸಲಾಗಿದೆ ಎಂದರು.

ಎಸ್ಟಿ ಸಮುದಾಯದ ಕಾರ್ಯಕ್ರಮಗಳಿಗಾಗಿ 10.12 ಲಕ್ಷ, ವೈಯಕ್ತಿಕ ಕಾರ್ಯಕ್ರಮಗಳಿಗಾಗಿ 6.74 ಲಕ್ಷ ಮೀಸರಿಸಲಾಗಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನಗರಸಭಾ ನಿಧಿಯಿಂದ 8.41 ಲಕ್ಷ ಕಾಯ್ದಿರಿಸಲಾಗಿದೆ. ಸದರಿ ಅನುದಾನದಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯ ಕಾರ್ಯಕ್ರಮಗಳಿಗಾಗಿ 5 ಲಕ್ಷ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ 3.36 ಲಕ್ಷ ಕಾಯ್ದಿರಿಸಲಾಗಿದೆ. ವಿಕಲಚೇತನರ ಕಲ್ಯಾಣ ಕ್ಕಾಗಿ 5.80 ಲಕ್ಷ ಮೀಸರಿಸಲಾಗಿದೆ ಎಂದರು.

Advertisement

ಚಾಮರಾಜನಗರ ವ್ಯಾಪ್ತಿಯಲ್ಲಿ ಉದ್ಯಾನವನ ಅಭಿವೃದ್ಧಿಗಾಗಿ 10 ಲಕ್ಷ ರೂ. ಕಾಯ್ದಿರಿಸಲಾಗಿದ್ದು ಪಾರ್ಕ್‌ ಅಭಿವೃದ್ಧಿ ಹಾಗೂ ನಗರದ ಹಸಿರೀಕರಣಗೊಳಿಸುವುದು ಆದ್ಯತೆಯಾಗಿದೆ. ಬೀದಿ ನಾಯಿಗಳ ನಿಯಂತ್ರಣ ಹಾಗೂ ಪ್ರಾಣಿಗಳ ಸಂರಕ್ಷಣೆಗಾಗಿ 10 ಲಕ್ಷ ಮೀಸಲಿರಿಸಲಾಗಿದೆ. ರಾಮಸಮುದ್ರದ ಹಳೆಯ ಪಂಪ್‌ಹೌಸ್‌ ಹತ್ತಿರ 30 ಲಕ್ಷ ವೆಚ್ಚದಲ್ಲಿ ಸ್ವಚ್ಛ ಗೃಹ ಕಲಿಕಾ ಕೇಂದ್ರ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ನಗರಸಭೆಯ ನಡೆ ವಾರ್ಡ್‌ಗಳ ಕಡೆ : ನಗರಸಭಾ ವ್ಯಾಪ್ತಿಯ ಪ್ರತಿ ವಾರ್ಡ್‌ಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸಲು ಹಾಗೂ ಸ್ಥಳದಲ್ಲಿ ಪರಿಹರಿಸಲಾಗದ ಸಮಸ್ಯೆಗಳನ್ನು ಅತೀ ಶೀಘ್ರದಲ್ಲಿ ಪರಿಹರಿಸಲು ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ತಂಡ ವಾರ್ಡ್‌ ಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಸಮಸ್ಯೆ ಬಗೆಹರಿಸಲು ನಗರಸಭೆಯ ನಡೆ ವಾರ್ಡ್‌ಗಳ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ನಗರಸಭೆಯ ಉಪಾಧ್ಯಕ್ಷೆ ಸುಧಾ, ಪೌರಾಯುಕ್ತ ರಾಮದಾಸ್‌ ಸೇರಿದಂತೆ ನಗರಸಭೆ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next