Advertisement

ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು

10:39 AM Jul 26, 2019 | Suhan S |

ಹನೂರು: ತಾಲೂಕಿನ ಗಂಗನದೊಡ್ಡಿ ಗ್ರಾಮಕ್ಕೆ ಆದರ್ಶ ಗ್ರಾಮ ಯೋಜನೆಯಡಿ 50 ಲಕ್ಷ, ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ 40 ಲಕ್ಷ ಮತ್ತು ಗ್ರಾಮದ ಸಂಪರ್ಕ ರಸ್ತೆಗೆ 30 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು ಒಟ್ಟು 1.2 ಕೋಟಿ ಅನುದಾನವನ್ನು ಗಂಗನದೊಡ್ಡಿ ಗ್ರಾಮಕ್ಕೆ ನೀಡಲಾಗಿದೆ ಎಂದು ಶಾಸಕ ಆರ್‌.ನರೇಂದ್ರ ಹೇಳಿದರು.

Advertisement

ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ 40 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

1.2 ಕೋಟಿ ರೂ. ಅನುದಾನ: ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಕುಗ್ರಾಮವಾದ ಗಂಗನದೊಡ್ಡಿ ಗ್ರಾಮಕ್ಕೆ 1.2 ಕೋಟಿ ರೂ. ಅನುದಾನ ನೀಡಲಾಗಿದೆ. ಕಳೆದ 6 ವರ್ಷಗಳ ಅವಧಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕ್ಷೇತ್ರ ವ್ಯಾಪ್ತಿಯ ಪ.ಜಾತಿ ಮತ್ತು ಪಂಗಡದ ಸಮುದಾಯದವರು ವಾಸಿಸುವ ಶೇ.90ರಷ್ಟು ಬಡಾವಣೆಗಳಲ್ಲಿ ಕಾಂಕ್ರೀಕ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವ ಮೂಲಕ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ಈ ಹಿಂದೆ ಯಾವುದೇ ಒಂದು ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೆ ಇದು ಎಸ್‌.ಸಿ ಅಥವಾ ಎಸ್‌.ಟಿ ಸಮುದಾಯದವರು ವಾಸ ಮಾಡುವ ಬಡಾವಣೆಯೇ ಎಂದು ಪ್ರಶ್ನಿಸುವಂತಹ ಪರಿಸ್ಥಿತಿಯಿತ್ತು. ಆದರೆ ಇಂದು ಸುಸಜ್ಜಿತ ರಸ್ತೆ ಮತ್ತು ಚರಂಡಿ ಕಂಡರೆ ಇದು ಎಸ್‌.ಸಿ ಅಥವಾ ಎಸ್‌.ಟಿ ಜನಾಂಗದವರು ವಾಸಿಸುವ ಬಡಾವಣೆಯೇ ಎಂದು ಪ್ರಶ್ನಿಸುವಂತಾಗಿದೆ ಎಂದು ತಿಳಿಸಿದರು.

ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ: ಓರ್ವ ಜನಪ್ರತಿನಿಧಿಯಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ತರುವುದು ನನ್ನ ಕರ್ತವ್ಯವಾಗಿರುತ್ತದೆ. ಆದರೆ ಇಲಾಖೆಗಳಿಗೆ ತೆರಳಿ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ತಂದಂತಹ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದ ಜವಾಬ್ದಾರಿ ಆಯಾ ಗ್ರಾಮಗಳ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಜವಾಬ್ದಾರಿಯಾಗಿರುತ್ತದೆ ಎಂದರು.

Advertisement

ಲೋಪದೋಷ ಕಂಡರೆ ತಿಳಿಸಿ:ಆದ್ದರಿಂದ ಕಾಮ ಗಾರಿಗಳು ಜರುಗುವ ವೇಳೆ ಯಾವುದೇ ಲೋಪ ದೋಷಗಳು ಕಂಡುಬಂದಲ್ಲಿ ಕೂಡಲೇ ತಮ್ಮ ಗಮನಕ್ಕೆ ತರಬೇಕು ಹಾಗೂ ಸಂಬಂಧಪಟ್ಟ ಗುತ್ತಿಗೆದಾರರೂ ಸಹ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸಿ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು ಮತ್ತು ಕ್ಯೂರಿಂಗ್‌ ಸಹ ಸಮರ್ಪಕವಾಗಿ ಜರುಗಬೇಕು. ಒಂದೊಮ್ಮೆ ಲೋಪದೋಷಗಳು ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

ಭೂಮಿಪೂಜೆ: ಇದೇ ವೇಳೆ ಗೋಪಿಶೆಟ್ಟಿಯೂರು ಗ್ರಾಮದಲ್ಲಿ 25 ಲಕ್ಷ ವೆಚ್ಚದ ಕಾಮಗಾರಿಗೆ, ನಲ್ಲೂರು ಗ್ರಾಮದಲ್ಲಿ 16 ಲಕ್ಷ ವೆಚ್ಚದ ಕಾಮಗಾರಿಗೆ, ಹೂಗ್ಯಂ ಗ್ರಾಮದಲ್ಲಿ 40 ಲಕ್ಷ ವೆಚ್ಚದ ಕಾಮಗಾರಿಗೆ ಹಾಗೂ ಚಿನ್ನಾರಿ ದೊಡ್ಡಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಮೃತರ ಕುಟುಂಬಸ್ಥರಿಗೆ ಸಾಂತ್ವನ: ಅನಾರೋಗ್ಯದಿಂದ ಗ್ರಾಪಂ ಸದಸ್ಯ ಕೂಡ್ಲೂರು ಸಿದ್ಧರಾಜು ಅವರ ತಂದೆ ಮೃತ ಪಟ್ಟಿದ್ದ ಹಿನ್ನೆಲೆ ಅವರ ಮನೆಗೆ ಭೇಟಿ ನೀಡಿದ ಶಾಸಕ ನರೇಂದ್ರ ಮೃತರ ಭಾವಚಿತ್ರಕ್ಕೆ ಪುಷ್ಪಮಾಲಿಕೆ ಹಾಕಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯರಾದ ನಟರಾಜು, ಹೂಗ್ಯಂ ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ಮಾದರಾಜು, ರಾಮಾಪುರ ಅಧ್ಯಕ್ಷೆ ನಲ್ಲಮ್ಮ, ಮುಖಂಡರಾದ ಪಾಳ್ಯ ಕೃಷ್ಣ, ಗುಂಡಾಪುರ ಜಯರಾಜು, ರಾಮಾಪುರ ನಾಗ ರಾಜು, ಗುತ್ತಿಗೆದಾರರಾದ ಅಜ್ಜೀಪುರ ನಾಗರಾಜು, ಕೊಳ್ಳೇಗಾಲ ಲೋಕೇಶ್‌, ಸತೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next