Advertisement

ಶಿಕ್ಷಕರ ವರ್ಗಾವಣೆ ಇನ್ನಷ್ಟು ವಿಳಂಬ?

01:02 AM Oct 03, 2020 | mahesh |

ಬೆಂಗಳೂರು: ಶಾಲಾ ಶಿಕ್ಷಕರ ವರ್ಗಾವಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದರೂ ಸರಕಾರದಿಂದ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ಈ ನಡುವೆ ಮತ್ತೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವ ಆತಂಕ ಶಿಕ್ಷಕರಲ್ಲಿ ಮನೆ ಮಾಡಿದೆ.

Advertisement

ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020 ಉಭಯ ಸದನಗಳಲ್ಲಿ ಅಂಗೀಕಾರಗೊಂಡು ರಾಜ್ಯಪಾಲರ ಅಂಕಿತವೂ ಬಿದ್ದಿದೆ. ಅದರಂತೆ ಶಿಕ್ಷಕರ ವರ್ಗಾವಣೆಗಾಗಿ ಕರಡು ನಿಯಮ ಸಿದ್ಧ ಪಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಶಿಕ್ಷಕರು ಮತ್ತು ಶಿಕ್ಷಕರ ಸಂಘದಿಂದ ಆಕ್ಷೇಪಣೆ ಗಳನ್ನು ಸಲ್ಲಿಸಲಾಗಿದೆ. ಅವುಗಳನ್ನು ಕ್ರೋಡೀಕರಿಸಿ ಅಂತಿಮ ನಿಯಮ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಜತೆಗೆ ಖಾಲಿ ಹುದ್ದೆ ಗಳ ಮಾಹಿತಿ, ಶಿಕ್ಷಕರ ಸೇವಾಮಾಹಿತಿ ಸಹಿತ ವರ್ಗಾವಣೆಗೆ ಪೂರಕ ವಿವರಗಳನ್ನು ಇಲಾಖೆ ಕಲೆಹಾಕಿದೆ. ಆದರೆ ಸರಕಾರದಿಂದ ಹಸುರು ನಿಶಾನೆ ಸಿಕ್ಕಿಲ್ಲ.

ಉಪಚುನಾವಣೆ ನೀತಿ ಸಂಹಿತೆ ಅಡ್ಡಿ?
ಈಗಾಗಲೇ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಉಪ ಚುನಾವಣೆ ಘೋಷಣೆಯಾಗಿದೆ. ಅಲ್ಲದೆ ಪದವೀಧರ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್‌ ಚುನಾವಣೆಯೂ ಘೋಷಣೆಯಾಗಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆಯ ನಡುವೆ ವರ್ಗಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯಿಂದ ಈ ಸಂಬಂಧ ಚುನಾವಣ ಆಯೋಗಕ್ಕೆ ಪತ್ರ ಬರೆದು ಆಯೋಗದ ಒಪ್ಪಿಗೆಯನ್ನು ಪಡೆಯ ಬೇಕಾಗುತ್ತದೆ. ಇಲ್ಲವಾದರೆ ಚುನಾವಣೆ ಮುಗಿದು ಫ‌ಲಿತಾಂಶ ಬರುವವರೆಗೂ ಪ್ರಕ್ರಿಯೆ ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಳಂಬವಾದರೆ ಶಿಕ್ಷಕರಿಗೆ ಸಮಸ್ಯೆ
ವರ್ಗಾವಣೆ ವಿಳಂಬವಾದಷ್ಟು ಶಿಕ್ಷಕರಿಗೆ ಸಮಸ್ಯೆಯಾಗುತ್ತದೆ. ವಿದ್ಯಾಗಮ ನಡೆಯುತ್ತಿರುವುದರಿಂದ ಏಕಾಏಕಿ ವರ್ಗಾವಣೆ ಆದೇಶ ನೀಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವರ್ಗಾವಣೆ ನಡೆಸಬೇಕು ಎಂದು ನಿಯಮವೇ ಹೇಳುತ್ತದೆ. ಆದರೆ ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈಗ ಪ್ರಕ್ರಿಯೆ ಆರಂಭಿಸದೇ ಇದ್ದರೆ ಶಾಲಾರಂಭವಾದ ಅನಂತರ ವರ್ಗಾವಣೆ ಕೌನ್ಸೆಲಿಂಗ್‌ ಕಷ್ಟವಾಗಲಿದೆ. ಮತ್ತೇ ಮುಂದಿನ ಶೈಕ್ಷಣಿಕ ವರ್ಷದ ಆರಂಭದವರೆಗೂ ಕಾಯಬೇಕಾಗುತ್ತದೆ. ಈ ವರ್ಷವೂ ವರ್ಗಾವಣೆ ಇಲ್ಲದೇ ಕಳೆದುಹೋಗಬಹುದು ಎಂದು ಶಿಕ್ಷಕರು ಆತಂಕ ಹೊರಹಾಕಿದ್ದಾರೆ.

ಶಿಕ್ಷಕರ ವರ್ಗಾವಣೆ ಸಂಬಂಧ ಶಿಕ್ಷಕ ಮಿತ್ರ ಆ್ಯಪ್‌ ಸಿದ್ಧವಾಗಿದೆ. ಆ್ಯಪ್‌ನಲ್ಲೇ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಶೀಘ್ರದಲ್ಲಿ ಸರಕಾರ ಪ್ರಕ್ರಿಯೆ ಆರಂಭಿಸಲಿದೆ ಎಂಬ ನಿರೀಕ್ಷೆಯಿದೆ. ಈ ಸಂಬಂಧ ಶಿಕ್ಷಣ ಸಚಿವರೊಂದಿಗೆ ಅನೇಕ ಬಾರಿ ಮಾತುಕತೆ ನಡೆಸಿದ್ದೇವೆ.
-ವಿ.ಎಂ. ನಾರಾಯಣ ಸ್ವಾಮಿ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

Advertisement

ವರ್ಗಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗು ತ್ತದೆಯೇ ಇಲ್ಲವೇ ಎನ್ನುವುದನ್ನು ಚುನಾವಣ ಆಯೋಗದಿಂದ ಸ್ಪಷ್ಟಪಡಿಸಿಕೊಳ್ಳಬೇಕಿದೆ.
-ಉಮಾಶಂಕರ್‌ ಪ್ರಾ., ಪ್ರೌಢಶಿಕ್ಷಣ ಇಲಾಖೆ ಪ್ರ. ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next