Advertisement

ಮುಂದುವರಿದ ದೇಶಗಳಲ್ಲೇ ಹೆಚ್ಚು ಸಾವು

12:50 PM Jun 20, 2020 | mahesh |

ವಾಷಿಂಗ್ಟನ್‌: ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಾಲಿನಲ್ಲಿ ಮುಂದುವರಿದ ದೇಶಗಳೇ ಮುಂಚೂಣಿಯಲ್ಲಿ ಇವೆ. ಅಮೆರಿಕ, ಬ್ರಜಿಲ್‌, ಬ್ರಿಟನ್‌, ಇಟಲಿಯಲ್ಲಿ ಅತಿ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಈ ಸಂಖ್ಯೆ 12,573 ಆಗಿದ್ದು ಎಂಟನೇ ಸ್ಥಾನದಲ್ಲಿ ಇದೆ.

Advertisement

ಕೋವಿಡ್‌ ಸಾವಿನ ಸಂಖ್ಯೆಯನ್ನು ವಿಶ್ವಾದ್ಯಂತ ಲೆಕ್ಕಾಚಾರ ಹಾಕುವ ವಲ್ಡೊಮೀಟರ್‌ ದತ್ತಾಂಶದ ಪ್ರಕಾರ, ಈವರೆಗೆ ಒಟ್ಟು 4,56,291 ಮಂದಿ ಮೃತಪಟ್ಟಿದ್ದಾರೆ. 86 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 213 ದೇಶಗಳಿಗೆ ಸೋಂಕು ವ್ಯಾಪಿಸಿದೆ. ಜತೆಗೆ ಆ ದೇಶಗಳ ವಿವಿಧ ಪ್ರಾಂತ್ಯಗಳಲ್ಲಿ ಹಬ್ಬುತ್ತಿದೆ. ಅಮೆರಿಕದಲ್ಲಿ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 12,0688 ಆಗಿದೆ. ಬ್ರಜಿಲ್‌ನಲ್ಲಿ 47,869 ಮಂದಿ ಮೃತಪಟ್ಟಿದ್ದು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಬ್ರಿಟನ್‌ನಲ್ಲಿ 42,288 ಮಂದಿ ಮೃತಪಟ್ಟಿದ್ದು ಮೂರನೇ ಸ್ಥಾನದಲ್ಲಿದೆ. ಯುರೋಪ್‌ನಲ್ಲಿ ಅತಿ ಹೆಚ್ಚು ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟ ಎರಡನೇ ದೇಶ ಇಟಲಿಯಾಗಿದ್ದು, 35,514 ಮಂದಿ ಸಾವಿಗೀಡಾಗಿದ್ದಾರೆ. ಇಟಲಿಯ ಬಳಿಕದ ಸ್ಥಾನವನ್ನು ಫ್ರಾನ್ಸ್‌ ಪಡೆದಿದ್ದು, 27,136 ಮಂದಿ ಮೃತಪಟ್ಟಿದ್ದಾರೆ. ಸ್ಪೇನ್‌ನಲ್ಲಿ 27,136 ಮಂದಿ ಸಾವಿಗೀಡಾಗಿದ್ದರೆ, ಉತ್ತರ ಅಮೆರಿಕದ ದೇಶವಾದ ಮೆಕ್ಸಿಕೋದಲ್ಲಿ 19,747 ಮಂದಿ ಮೃತಪಟ್ಟಿದ್ದಾರೆ. ಇನ್ನು ಕೆನಡಾದಲ್ಲಿ 8,300 ಮಂದಿ ಮೃತಪಟ್ಟಿದ್ದಾರೆ.

ಸಾವಿನ ಪ್ರಮಾಣ ಮುಂದುವರಿದ ದೇಶಗಳಲ್ಲೇ ಹೆಚ್ಚೇಕೆ?
ಮುಂದುವರಿದ ದೇಶಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಇದು ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅತ್ಯುತ್ತಮ ವೈದ್ಯಕೀಯ ವ್ಯವಸ್ಥೆಯಿದ್ದರೂ ಹೀಗೇಕೆ ಎಂಬ ಪ್ರಶ್ನೆಳಿಗಳಿವೆ. ಇದಕ್ಕೆ ಕೆಲವು ಪರಿಣತರು ಉತ್ತರಗಳನ್ನೂ ನೀಡುತ್ತಾರೆ. ಒಂದು ಸಾಮಾನ್ಯ ಉತ್ತರ ಎಂದರೆ ಅವಗಣನೆ. ಚೀನದಲ್ಲಿ ಸೋಂಕು ಹುಟ್ಟಿ ಅದು ಹರಡುತ್ತಿದ್ದಂತೆ ವಿವಿಧ ದೇಶಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಇನ್ನು ಮುಂದುವರಿದ ದೇಶಗಳಲ್ಲಿ ಜನರ ಓಡಾಟ, ವಿಮಾನ ಯಾನ ಇತ್ಯಾದಿಗಳು ಹೆಚ್ಚಿದ್ದು ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು. ಜತೆಗೆ ಜನತೆಗೆ ಮುಕ್ತ ಸ್ವಾತಂತ್ರ್ಯವಿದ್ದು, ಅವರು ಓಡಾಟವನ್ನು ಕಡಿಮೆ ಮಾಡಲಿಲ್ಲ. ಇನ್ನು ವೈದ್ಯಕೀಯ ವಿಚಾರದಲ್ಲಿ ವ್ಯವಸ್ಥೆ ಸಾಕಷ್ಟು ಮುಂದುವರಿದಿದ್ದೂ, ಇಂತಹ ಸಾಂಕ್ರಾಮಿಕ ಕಾಯಿಲೆಗಳು ಬಂದಾಗ ಅವುಗಳನ್ನು ನಿಯಂತ್ರಿಸುವ ಸುರಕ್ಷಾ ಕ್ರಮಗಳು, ಅವುಗಳಿಗೆ ಬೇಕಾದ ಪಿಪಿಇ ಕಿಟ್‌, ಗ್ಲೌಸ್‌ ಇತ್ಯಾದಿಗಳನ್ನು ಸಾಕಷ್ಟು ಪೇರಿಸಿ ಇಟ್ಟಿರಲಿಲ್ಲ. ಪರಿಸ್ಥಿತಿ ಗಂಭೀರಕ್ಕೆ ಹೋಗುತ್ತದೆ ಎಂದು ಗೊತ್ತಾದಾಗ, ಅದು ಸರಕಾರಗಳ ಕೈಯಿಂದ ಜಾರಿ ಹೋಗಿತ್ತು ಎಂದು ಸಾಂಕ್ರಾಮಿಕ ಕಾಯಿಲೆಗಳ ತಜ್ಞರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next