Advertisement

ಹೆಚ್ಚು ಪರೀಕ್ಷೆಯಿಂದ ಹೆಚ್ಚು ಪ್ರಕರಣ ; ಸೋಂಕು ಪೀಡಿತರ ಮನೆಯಷ್ಟೇ ಸೀಲ್‌ಡೌನ್‌

11:16 AM Jun 04, 2020 | mahesh |

ಉಡುಪಿ: ಕೋವಿಡ್ ಸಾಮಾಜಿಕ ಪಿಡುಗೂ ಅಲ್ಲ, ಸೋಂಕಿತರು ಕಳಂಕಿತರೂ ಅಲ್ಲ. ಉಡುಪಿ ಜಿಲ್ಲೆ ಮಂಗಳವಾರ ಮೊದಲ ಸ್ಥಾನಕ್ಕೆ ಬರಲು ದೊಡ್ಡ ಪ್ರಮಾಣದಲ್ಲಿ ಮಾದರಿ ಸಂಗ್ರಹ ಮತ್ತು ಪರೀಕ್ಷೆ ನಡೆದಿರುವುದು ಕಾರಣ ಎಂದು ವೈದ್ಯಕೀಯ ಶಿಕ್ಷಣ ಸಚಿವ, ಕೋವಿಡ್ ಉಸ್ತುವಾರಿ ಡಾ| ಸುಧಾಕರ್‌ ಹೇಳಿದರು. ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನ ಸಭೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್ ಪಾಸಿಟಿವ್‌ ಇದ್ದವರ ಮನೆಯನ್ನಷ್ಟೇ ಸೀಲ್‌ಡೌನ್‌ ಮಾಡುವ ಸಲಹೆಯನ್ನು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ರಘುಪತಿ ಭಟ್‌ ನೀಡಿದ್ದು, ಇದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಜಾರಿಗೊಳಿಸಲು ಯತ್ನಿಸಲಾಗುವುದು ಎಂದರು.

Advertisement

ಬೂತ್‌ ಮಟ್ಟದ ಕಾರ್ಯಪಡೆ
ಮುಂದೆ ಕೋವಿಡ್ ನಿಯಂತ್ರಣಕ್ಕಾಗಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಾರ್ಡ್‌, ಬೂತ್‌ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ನಿಗಾ ವಹಿಸಲಾಗುವುದು. 10 ಲಕ್ಷ ಜನರಿಗೆ ಅಗತ್ಯವಿದ್ದರೂ ಅದನ್ನು ನಿಭಾಯಿಸುವ ತಂತ್ರ ಜ್ಞಾನವಿದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನೀಡಿದ ಮಾರ್ಗದರ್ಶಿ ಸೂತ್ರಗಳನ್ನು ಮಂಗಳೂರಿಗೂ ಅನ್ವಯಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪರೀಕ್ಷಾ ಸಾಮರ್ಥ್ಯ ಹೆಚ್ಚಳ
ಕೋವಿಡ್ ಆರಂಭದಲ್ಲಿ ರಾಜ್ಯದಲ್ಲಿ ಎರಡೇ ಪ್ರಯೋಗಾಲಯಗಳಿದ್ದವು. ಈಗ 64 ಪ್ರಯೋಗಾಲಯಗಳಾಗಿವೆ. ಮಂಗಳವಾರದವರೆಗೆ 3.31 ಲಕ್ಷ ಮಾದರಿಗಳಲ್ಲಿ 3,792 ಪಾಸಿಟಿವ್‌ ವರದಿಯಾಗಿತ್ತು. ಇದರಲ್ಲಿ ಶೇ. 85 ಪ್ರಕರಣಗಳಲ್ಲಿ ರೋಗಲಕ್ಷಣಗಳಿಲ್ಲ. ಶೇ. 15 ಅಲ್ಪಸ್ವಲ್ಪ ಲಕ್ಷಣಗಳಿವೆ. ಶೇ. 3-4ರಷ್ಟು ಜನರಿಗೆ ಐಸಿಯು ಚಿಕಿತ್ಸೆ ಅಗತ್ಯ. 60 ವರ್ಷ ಪ್ರಾಯ ಮೇಲ್ಪಟ್ಟ ಮಧುಮೇಹ, ಹೃದ್ರೋಗ, ಮೂತ್ರ ಪಿಂಡ ಸಮಸ್ಯೆ ಇರುವವರಿಗೆ ಮಾತ್ರ ತೊಂದರೆಯಾಗುತ್ತಿದೆ. ಮಣಿಪಾಲ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಭೇಟಿ ಕೊಟ್ಟಿದ್ದೇನೆ. ಅಲ್ಲೀಗ ನಾಲ್ಕು ಯಂತ್ರಗಳನ್ನು ಅಳ ವಡಿಸಿದ್ದು, ದಿನಕ್ಕೆ 1,000 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆ ಯಾದ ಬಳಿಕ ದಿನಕ್ಕೆ ಒಟ್ಟು 1,200 ಪರೀಕ್ಷೆ ನಡೆಸಲು ಸಾಧ್ಯವಾಗುತ್ತದೆ ಎಂದರು.

ಕೇಂದ್ರದ ಮೆಚ್ಚುಗೆ
ರಾಜ್ಯ ಸರಕಾರ ಎಲ್ಲ ನಿರ್ಧಾರಗಳನ್ನೂ ವೈಜ್ಞಾನಿಕವಾಗಿ, ತಜ್ಞರ ಸಲಹೆಯಂತೆಯೇ ತೆಗೆದುಕೊಳ್ಳುತ್ತಿದೆ. ಡ್ಯಾಶ್‌ ಬೋರ್ಡ್‌, ಟೆಲಿ ಮೆಡಿಸಿನ್‌, ಟೆಲಿ ಐಸಿಯು, ಪ್ಲಾಸ್ಮಾ ಥೆರಪಿ ಯಂತಹ ನಾವು ಅಳವಡಿಸಿದ ಮಾರ್ಗಕ್ಕೆ ಕೇಂದ್ರ ಸರಕಾರವೂ ಮೆಚ್ಚುಗೆ ಸೂಚಿಸಿದೆ ಎಂದು ಸಚಿವರು ತಿಳಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಡಿಸಿ ಜಿ. ಜಗದೀಶ್‌, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್‌, ಶಾಸಕರಾದ ಕೆ. ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನಿಲ್‌ ಕುಮಾರ್‌, ಬಿ.ಎಂ. ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next