Advertisement

ಬಿಜೆಪಿ ವಾರ್ಡ್‌ಗಳಲ್ಲೇ ಹೆಚ್ಚು ಕ್ಯಾಂಟೀನ್‌

11:48 AM Aug 11, 2017 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್‌’ ಯೋಜನೆಗೆ ಆರಂಭದಿಂದಲೂ ಒಂದೊಂದು ಕಡೆ ಒಂದೊಂದು ರೀತಿಯ ವಿಘ್ನ. ಕೆಲವೆಡೆ ಜಾಗದ ಸಮಸ್ಯೆಯಾದರೆ, ಕೆಲವೆಡೆ ರಾಜಕೀಯದ ಸಮಸ್ಯೆ. ಈ ನಡುವೆ, ಬಿಜೆಪಿಯು ವಿನಾ ಕಾರಣ ಯೋಜನೆಗೆ ವಿರೋಧಿಸುತ್ತಿದೆ ಎಂದು ಕಾಂಗ್ರೆಸ್‌ ಗುಟುರು ಹಾಕುತ್ತಿದೆ.

Advertisement

ಬಿಜೆಪಿ ಯೋಜನೆಗೆ ಅಡ್ಡಗಾಲಾಗಿದೆ ಎಂಬ ಮಾತಿನ ನಡುವೆಯೇ ಇದೇ 16ರಂದು 100ಕ್ಯಾಂಟೀನ್‌ಗಳು ಉದ್ಘಾಟನೆಗೊಳ್ಳುತ್ತಿದ್ದು ಆ ಪೈಕಿ 46 ಕ್ಯಾಂಟೀನ್‌ಗಳು ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಲ್ಲಿಯೇ ತಲೆ ಎತ್ತಿವೆ ಎಂಬುದು ವಿಶೇಷ.  ನಗರದ ಹಲವಾರು ಭಾಗಗಳಲ್ಲಿ ಪಾಲಿಕೆಯ ಅಧಿಕಾರಿಗಳು ಕ್ಯಾಂಟೀನ್‌ ನಿರ್ಮಾಣಕ್ಕೆ ಸ್ಥಳ ಗುರುತಿಸಿದಾಗ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಲ್ಲಿಯೇ ಕ್ಯಾಂಟೀನ್‌ಗೆ ಅಪಸ್ವರ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಮೇಯರ್‌ ಜನರಿಗೆ ಅನುಕೂಲವಾಗುವ ಯೋಜನೆ ಜಾರಿಯಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದ್ದರು.  ಅದಾದ ಬಳಿಕವೂ ಹಲವಾರು ಕಡೆಗಳಲ್ಲಿ ವಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಧಿಕಾರಿಗಳು ಕ್ಯಾಂಟೀನ್‌ ಕಾಮಗಾರಿ ಸ್ಥಗಿತಗೊಳಿಸಿ, ಬೇರೊಂದು ಸ್ಥಳದಲ್ಲಿ ನಿರ್ಮಿಸಲು ತೀರ್ಮಾನಿಸಿದ್ದರು.

ಆ ಹಿನ್ನೆಲೆಯಲ್ಲಿ ಬಿಜೆಪಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಜಾರಿಗೆ ಅಡ್ಡಿಪಡಿಸುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ನೇರವಾಗಿಯೇ ಆರೋಪಿಸಿದ್ದರು.  ಆದರೆ, ಇತ್ತೀಚೆಗೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಸದ್ಯ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ 100 ಕ್ಯಾಂಟೀನ್‌ಗಳ ಪೈಕಿ 46 ಕ್ಯಾಂಟೀನ್‌ಗಳು ಬಿಜೆಪಿ ಸದಸ್ಯರಿರುವ ವಾರ್ಡ್‌ಗಳಲ್ಲಿಯೇ ಆಗುತ್ತಿದೆ.

ಇದರೊಂದಿಗೆ ಆಡಳಿತರೂಢ ಕಾಂಗ್ರೆಸ್‌ ಸದಸ್ಯರಿರುವ 43 ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಾಣವಾಗುತ್ತಿದೆ. ಉಳಿದಂತೆ ಜೆಡಿಎಸ್‌ ಪಕ್ಷದವರಿರುವ 6 ವಾರ್ಡ್‌ ಹಾಗೂ ಪಕ್ಷೇತರ ಸದಸ್ಯರಿರುವ 5 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.  ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ವಾರ್ಡ್‌ಗಳಲ್ಲಿನ ಪಾಲಿಕೆ ಸದಸ್ಯರು ಬಿಜೆಪಿಯವರೇ ಆಗಿದ್ದು, ಈಗಾಗಲೇ 4 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗಿದೆ.

Advertisement

ಇದರೊಂದಿಗೆ ಎಂಟು ವಾರ್ಡ್‌ಗಳನ್ನು ಹೊಂದಿರುವ ಬೊಮ್ಮನಹಳ್ಳಿ ಕ್ಷೇತ್ರದ 5 ಮಂದಿ ಬಿಜೆಪಿ ಸದಸ್ಯರ ವಾರ್ಡ್‌ಗಳಲ್ಲಿ ಕ್ಯಾಂಟೀನ್‌ ನಿರ್ಮಾಣವಾಗಿದೆ. ಆದರೆ, ಬಿಜೆಪಿ ಶಾಸಕರಿರುವ ಜಯನಗರ, ಯಲಹಂಕ, ರಾಜಾಜಿನಗರ ಕ್ಷೇತ್ರಗಳಲ್ಲಿನ ತಲಾ ಒಂದು ವಾರ್ಡ್‌ನಲ್ಲಿ ಮಾತ್ರ ಕ್ಯಾಂಟೀನ್‌ ನಿರ್ಮಾಣ ನಡೆಸಲಾಗುತ್ತಿದೆ.    

ಬಿಬಿಎಂಪಿ ವತಿಯಿಂದ ಕಾನೂನಾತ್ಮಕವಾಗಿಯೇ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗುತ್ತಿದೆ. ಕಾಂಗ್ರೆಸ್‌ ಸದಸ್ಯರು ಕ್ಯಾಂಟೀನ್‌ ಜಾರಿಗೆ ಶ್ರಮವಹಿಸಬೇಕು. ಯಾವುದೇ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ, ಎಲ್ಲ ಪಕ್ಷದವರು ಸಹಕಾರ ನೀಡುವುದು ಅಗತ್ಯ. ಆದರೆ, ಬಿಜೆಪಿಯ ಹಲವಾರು ಮಾಜಿ ಪಾಲಿಕೆ ಸದಸ್ಯರೇ ಮುಂದೆ ನಿಂತು ಪ್ರತಿಭಟನೆ ನಡೆಸಿರುವುದು ಎಷ್ಟು ಸರಿ? 
-ಜಿ.ಪದ್ಮಾವತಿ, ಮೇಯರ್‌  

ಬಿಜೆಪಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಎಲ್ಲಿಯೂ ವಿರೋಧ ಮಾಡಿಲ್ಲ. ಆದರೆ, ಯೋಜನೆಯನ್ನು ಕಾನೂನು ಬದ್ಧವಾಗಿ ಜಾರಿಗೊಳಿಸುವ ಹಾಗೂ ಕಾನೂನು ಪಾಲನೆ ಮಾಡುವಂತೆ ತಿಳಿಸಲಾಗಿದೆ. ಕೆರೆಗಳು, ಕಾಲುವೆಗಳು, ಪಾದಚಾರಿ ಮಾರ್ಗಗಳಲ್ಲಿ ಕ್ಯಾಂಟೀನ್‌ಗಳನ್ನು ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಪಾಲಿಕೆಯ ಅಧಿಕಾರಿಗಳೇ ಕಾನೂನು ಪಾಲಿಸದಿದ್ದರೆ ಮುಂದೆ ಸಾಮಾನ್ಯರು ತಪ್ಪು ಮಾಡಿದಾದ ಪ್ರಶ್ನಿಸುವ ನೈತಿಕತೆ ಇರುವುದಿಲ್ಲ.  
-ಪದ್ಮನಾಭರೆಡ್ಡಿ, ಪ್ರತಿಪಕ್ಷ ನಾಯಕ   

* ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next