ಜೇವರ್ಗಿ: ಪಟ್ಟಣದ ವಿಜಯಪುರ ರಸ್ತೆಯ ಓಂ ನಗರ ಬಡಾವಣೆಯ ಲೋಕೋಪಯೋಗಿ ಕಚೇರಿ ಹತ್ತಿರ ಇರುವ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯು 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100ಕ್ಕೆ 100 ಫಲಿತಾಂಶ ದಾಖಲಿಸುವ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿದೆ.
ಬಡ, ಹಿಂದುಳಿದ, ಅಲ್ಪಸಂಖ್ಯಾತ, ದಲಿತ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಕೂಡ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆದುಕೊಳ್ಳಲಿ ಎನ್ನುವ ಸದುದ್ದೇಶದಿಂದ ಮೊರಾರ್ಜಿ, ಆದರ್ಶ, ಕಿತ್ತೂರು ರಾಣಿ ಚನ್ನಮ್ಮ, ಡಾ| ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳನ್ನು ಆರಂಭಿಸಲಾಗಿದೆ. ತಾಲೂಕಿನ ಯಾವ ಖಾಸಗಿ ಶಾಲೆಗಳು ಮಾಡದಂತ ಸಾಧನೆ ಕಳೆದ ಅನೇಕ ವರ್ಷಗಳಿಂದ ಪಟ್ಟಣದ ಮೊರಾರ್ಜಿ ವಸತಿ ಶಾಲೆ ಮಾಡುತ್ತಿರುವುದು ಶ್ಲಾಘನೀಯ.
2017-18ರಲ್ಲಿ ಶೇ.99.9ರಷ್ಟು ಫಲಿತಾಂಶ ಹೊರತುಪಡಿಸಿದರೆ, ಕಳೆದ 2012ರಿಂದ 2020ರ ವರೆಗೆ ಸತತ ಶೇ.100 ಫಲಿತಾಂಶ ಪಡೆದ ಈ ಶಾಲೆಯ ಮಕ್ಕಳು ಕೀರ್ತಿ ಹೆಚ್ಚಿಸಿದ್ದಾರೆ. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊರಾರ್ಜಿ ಶಾಲೆಯ ಒಟ್ಟು 50 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. 26 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್, 24 ಜನ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಜಯಶ್ರೀ ಹಾಗೂ ಪ್ರಿಯಾಂಕಾ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದಿದ್ದು, ಹಿಂದಿ ಭಾಷೆಯಲ್ಲಿ ಸಂಜನಾ ಎಂ, ಭಾಗಮ್ಮ ಆರ್, ಸುಮತಿ, ಪ್ರಿಯಾಂಕಾ, ಅಶ್ವಿನಿ, ಸಕ್ಕುಬಾಯಿ 100ಕ್ಕೆ 100 ಅಂಕ ಪಡೆದಿದ್ದಾರೆ. ಸಂಜನಾ. ಎಂ 598 ಅಂಕ (ಶೇ. 95.68), ಭಾಗಮ್ಮ ಆರ್. 595 ಅಂಕ (95.20), ಸುಮತಿ ಜಿ. 589 ಅಂಕ (94.24), ಪ್ರಿಯಾಂಕಾ ಆರ್. 587 ಅಂಕ (93.92), ಸಾನಿಯಾ ಎ. 586 ಅಂಕ (93.76), ಸೌಮ್ಯ.ಎ 580 ಅಂಕ (92.80), ಸುಪ್ರಿಯಾ ಜಿ. 573 ಅಂಕ (91.68), ಸಾವಿತ್ರಿ ಬಿ. 567 ಅಂಕ (90.72), ರಾ ಧಿಕಾ ಜಿ. 566 ಅಂಕ (90.56) ಪ್ರತಿಶತ ಅಂಕ ಪಡೆದು ಸಾಧನೆ ಮಾಡಿದ್ದಾರೆ. ಶಾಲೆಯಲ್ಲಿ ಸಮಾಜ ವಿಜ್ಞಾನ ಹಾಗೂ ವಾರ್ಡನ್ ಹುದ್ದೆ ಖಾಲಿ ಇದ್ದರೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಾಲೆ ಅವಧಿ ಮುಗಿದ ನಂತರ ಶಿಕ್ಷಕರು ವಿಶೇಷ ತರಗತಿ ನಡೆಸಿದ ಪರಿಣಾಮ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ.
ಸರ್ಕಾರ ಪ್ರತಿ ತಿಂಗಳು ನಮಗೆ ಸಂಬಳ ನೀಡುತ್ತಿದೆ. ಸಂಬಳಕ್ಕಾಗಿ ನಾವು ಕೆಲಸ ಮಾಡದೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಬೇಕು ಎನ್ನುವ ದೃಢ ನಿರ್ಧಾರ ತೆಗೆದುಕೊಂಡು ಎಲ್ಲಾ ಶಿಕ್ಷಕರು ಶ್ರಮಿಸಿದ ಹಿನ್ನೆಲೆಯಲ್ಲಿ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ನಿರಂತರ ಓದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ ಲಭಿಸಿದೆ.-
ನವೀದ್ ಅಂಜುಮ್ ಸಲ್ಮಾ, ಪ್ರಾಂಶುಪಾಲರು, ಮೊರಾರ್ಜಿ ವಸತಿ ಶಾಲೆ, ಜೇವರ್ಗಿ
– ವಿಜಯಕುಮಾರ ಎಸ್.ಕಲ್ಲಾ