Advertisement

ಡಿ.ಕೆ.ಶಿವಕುಮಾರ್‌ಗೆ ಕಾಂಗ್ರೆಸ್‌ ನಾಯಕರ ನೈತಿಕ ಬೆಂಬಲ

11:04 PM Sep 01, 2019 | Lakshmi GovindaRaj |

ಬೆಂಗಳೂರು: ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ದೆಹಲಿಯಲ್ಲಿ ಭಾನುವಾರ ಭೇಟಿಯಾದ ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ನೇತೃತ್ವದ ಮಾಜಿ ಶಾಸಕರು, ಮುಖಂಡರ ನಿಯೋಗ, ಅವರೊಂದಿಗೆ ಮಾತುಕತೆ ನಡೆಸಿತು.

Advertisement

ಮಾಜಿ ಸಚಿವ ಎನ್‌.ಚೆಲುವರಾಯಸ್ವಾಮಿ ನೇತೃತ್ವದ ನಿಯೋ ಗದಲ್ಲಿ ಮಾಜಿ ಶಾಸಕರಾದ ಎಚ್‌.ಸಿ.ಬಾಲಕೃಷ್ಣ, ಪಿ.ಎಂ.ನರೇಂದ್ರ ಸ್ವಾಮಿ, ಮುಖಂಡ ರವಿ ಕುಮಾರ್‌ ಗಣಿಗ ಹಾಗೂ ಇತರರಿದ್ದರು. ದೆಹಲಿಯ ಕರ್ನಾಟಕ ಭವನದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ಮುಖಂಡರು, ಇಡಿ ವಿಚಾರಣೆ ಸಂಬಂಧ ಚರ್ಚಿಸಿದರು. ಡಿಕೆಶಿಗೆ ನೈತಿಕ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು ಎಂದು ತಿಳಿದು ಬಂದಿದೆ.

ಭೇಟಿ ಬಳಿಕ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ನಾಯಕರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಅವರ ಹೇಳಿಕೆಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಗುಜರಾತ್‌ನ ಶಾಸಕರನ್ನು ಬೆಂಗಳೂರಿನಲ್ಲಿ ರಕ್ಷಣೆ ಮಾಡಿದ್ದಕ್ಕೆ ಡಿ.ಕೆ.ಶಿವಕುಮಾರ್‌ ಅವರನ್ನು ಟಾರ್ಗೆಟ್‌ ಮಾಡಲಾಗಿದೆ. ಡಿ.ಕೆ.ಶಿವಕುಮಾರ್‌ ಅವರು ಧೈರ್ಯವಾಗಿದ್ದು, ಎಲ್ಲವನ್ನೂ ಎದುರಿಸಲು ಸಿದ್ಧರಿದ್ದಾರೆ. ಕಾನೂನು ಹೋರಾಟ ನಡೆಸು ತ್ತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ದೂರಿದರು.

ತನಿಖೆ ನೆಪದಲ್ಲಿ ಡಿಕೆಶಿಗೆ ಕಿರುಕುಳ
ಮೈಸೂರು: ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲಿ ಇಡಿ ದುರುದ್ದೇಶ ಪೂರ್ವಕವಾಗಿ ತನಿಖೆ ನೆಪದಲ್ಲಿ ಕಿರುಕುಳ ಕೊಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ ನಾಯಕರಿಗೆ ಮಾನಸಿಕ ಕಿರುಕುಳ ಕೊಟ್ಟು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಡಿ.ಕೆ.ಶಿವಕುಮಾರ್‌ ಪ್ರಕರಣದಲ್ಲೂ ಇಡಿ ದುರುದ್ದೇಶ ಪೂರ್ವಕವಾಗಿ ತನಿಖೆ ನೆಪದಲ್ಲಿ ಕಿರುಕುಳ ಕೊಡುತ್ತಿದೆ. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ.

Advertisement

ಆಪರೇಷನ್‌ ಕಮಲದ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಸದನದಲ್ಲಿ ಹಲವರ ಹೆಸರು ಪ್ರಸ್ತಾಪವಾಗಿದ್ದರೂ ಏಕೆ ತನಿಖೆಗೆ ಮುಂದಾಗಿಲ್ಲ ಎಂದು ವಾಗ್ಧಾಳಿ ನಡೆಸಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಸೆಳೆಯಲು ಕೋಟಿ, ಕೋಟಿ ಹಣದ ಆಮಿಷವೊಡ್ಡಲಾಗಿದೆ. ಶ್ರೀನಿವಾಸಗೌಡ ಓಪನ್‌ ಆಗಿ ತಮಗೆ 5 ಕೋಟಿ ರೂ.ಕೊಡಲು ಬಂದಿದ್ದರು ಅಂತ ಹೇಳಿದ್ದರು. ಎಸ್‌.ಆರ್‌.ವಿಶ್ವನಾಥ್‌, ಅಶ್ವತ್ಥ ನಾರಾಯಣ್‌, ಸಿ.ಪಿ.ಯೋಗೇಶ್ವರ್‌ ಬಗ್ಗೆ ಗಂಭೀರ ಆರೋಪ ಮಾಡಿದ್ದರೂ ಬಿಜೆಪಿ ಸುಮ್ಮನಾಗಿದೆ. ಕಾನೂನು ಅಂದ್ರೆ ಎಲ್ಲರಿಗೂ ಒಂದೇ ಆಗಿದೆ. ಆದರೆ, ಕಾಂಗ್ರೆಸ್‌ ನಾಯಕರನ್ನು ಟಾರ್ಗೆಟ್‌ ಮಾಡಿ ತನಿಖೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ್ದೆನ್ನಲಾದ ಹಣದ ಬಗ್ಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಇದು ತಪ್ಪಾ? ಇದಕ್ಕೂ, ಬಿಜೆಪಿಗೂ ಸಂಬಂಧವಿಲ್ಲ. ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ.
-ಜಗದೀಶ ಶೆಟ್ಟರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next