ಮಂಗಳೂರು: ಅವಿಭಜಿತ ದ.ಕ.ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರು ಬಲಿಷ್ಠ ತಳಹದಿಯನ್ನು ಹಾಕಿಕೊಟ್ಟಿದ್ದು, ಅದರ ಪರಿಣಾಮವೇ ಇಂದು ಸಹಕಾರಿ ಕ್ಷೇತ್ರ ಬೆಳೆದುನಿಂತಿದೆ. ಈ ಕ್ಷೇತ್ರವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಜನರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್ ಸಹಯೋಗದಲ್ಲಿ ನಡೆದ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ 137ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಹಕಾರಿ ಸಂಘಗಳು ರೈತರಿಗೆ ಸೇವೆ ನೀಡಿದರೂ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾಲ ಮನ್ನಾ, ಬಡ್ಡಿ ಮನ್ನಾದ ಹಣಗಳು ಸಹಕಾರಿ ಸಂಘಗಳಿಗೆ ತಲುಪುವಾಗ ತಡವಾಗುತ್ತಿದೆ. ರಾಜ್ಯದಲ್ಲಿ ವೈದ್ಯನಾಥನ್ ವರದಿ ಹೆಸರಿಗೆ ಮಾತ್ರ ಜಾರಿಯಲ್ಲಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರ ನಗದುರಹಿತ ವ್ಯವಹಾರಕ್ಕೆ ಸನ್ನದ್ಧವಾಗಿದೆ ಎಂದರು.
ಮುಖ್ಯ ಅತಿಥಿ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ| ಶೇಖರಗೌಡ ಮಾಲಿ ಪಾಟೀಲ ಮಾತನಾಡಿ, ದ.ಕ. ಜಿಲ್ಲೆಯ ಸಹಕಾರಿ ಕ್ಷೇತ್ರದ ಪಿತಾಮಹ ಎನಿಸಿಕೊಂಡಿರುವ ಮೊಳಹಳ್ಳಿ ಶಿವರಾವ್ ಅವರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಶ್ರಮದ ಫಲವಾಗಿಯೇ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರ ರಾಜ್ಯದಲ್ಲೇ ಪ್ರಬಲವಾಗಿದೆ. ಸರಕಾರ ಸಾಲ ಮನ್ನಾ, ಬಡ್ಡಿ ಮನ್ನಾದಂತಹ ತೀರ್ಮಾನ ಕೈಗೊಳ್ಳುವ ಸಂದರ್ಭದಲ್ಲಿ ಸಹಕಾರಿ ಸಂಘಗಳ ಕುರಿತು ಆಲೋಚಿ ಸುವುದು ಅಗತ್ಯ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಿರಂಜನ ರೈ, ಶಶಿಕುಮಾರ್ ರೈ, ಸದಾಶಿವ ಉಳ್ಳಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್, ಯೂನಿಯನ್‌ನ ಪ್ರಭಾರ ಸಿಇಒ ನಾಗಪ್ರಸಾದ್, ಉಪಾಧ್ಯಕ್ಷ ಸುಂದರ ಗೌಡ ಇಚ್ಚಿಲ, ಖಜಾಂಚಿ ಪ್ರಫುಲ್ಲ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಉಪಸ್ಥಿತರಿದ್ದರು.
ಯೂನಿಯನ್ ನಿರ್ದೇಶಕ ನೀಲಯ್ಯ ಅಗರಿ ಸ್ವಾಗತಿಸಿ, ಪ್ರಸಾದ್‌ಕೌಶಲ್ ಶೆಟ್ಟಿ ವಂದಿಸಿದರು. ಲಕ್ಷ್ಮಣ್‌ಕುಮಾರ್ ಮಲ್ಲೂರು ಕಾರ್ಯಕ್ರಮ ನಿರ್ವಹಿಸಿದರು.