Advertisement

ಮೂಲ್ಕಿ ಗತ ವೈಭವವನ್ನು ಮರಳಿ ಪಡೆಯಲಿ: ಹರಿಕೃಷ್ಣ ಪುನರೂರು

12:41 PM Dec 18, 2017 | |

ಮೂಲ್ಕಿ : ಶತಮಾನಗಳಿಂದಲೂ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡಿದ್ದ ಮೂಲ್ಕಿ ನಗರ ಅವಿಭಜಿತ ಜಿಲ್ಲೆಯಲ್ಲಿಯೇ ಒಂದು ಕೇಂದ್ರ ಪ್ರದೇಶವಾಗಿತ್ತು ಎಂಬ ದಾಖಲೆ ಇದ್ದರೂ ಈಗ ಎಲ್ಲವನ್ನು ಕಳೆದುಕೊಂಡಿರುವ ಗತ ಕಾಲದ ವೈಭವವನ್ನು ಮತ್ತೆ ಮರಳಿ ಪಡೆಯುವ ಪ್ರಯತ್ನ ಮೂಲ್ಕಿಯ ಜನರದ್ದಾಗಬೇಕು ಎಂದು ರಾಜ್ಯ ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಅವರು ಮೂಲ್ಕಿ ನೂತನವಾಗಿ ಆರಂಭಗೊಂಡ ನಾಗರಿಕ ಹಿತ ರಕ್ಷಣ ವೇದಿಕೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಮೂಲ್ಕಿಯಲ್ಲಿ ಸರಕಾರದ ಎಲ್ಲ ಪ್ರಮುಖ ಇಲಾಖೆಗಳ ಕಚೇರಿ, ನ್ಯಾಯಲಯ ಹಾಗೂ ರಾಜಕೀಯವಾಗಿ ಮಾತ್ರವಲ್ಲದೆ ಇತರ ಮೂಲ ಸೌಕರ್ಯಗಳ ಕೇಂದ್ರವಾಗಿ ಬೆಳೆದ ಮೂಲ್ಕಿ ಸೇತುವೆಯ ನಿರ್ಮಾಣದಿಂದ ಬಂದರು ಸಂಪರ್ಕದಿಂದ ನಿಂತು ವ್ಯವಹಾರ ಮಂಗಳೂರಿನತ್ತಾ ವರ್ಗಾವಣೆಯಾದ ದಿನದಿಂದ ಮೂಲ್ಕಿ ನಗಣ್ಯವಾಗಲು ಸುರುವಾಯಿತು ಎಂದು ಪುನರೂರು ಹೇಳಿದರು.

ಮೂಲ್ಕಿ ಬಪ್ಪನಾಡು ದೇವಸ್ಥಾನದ ಆಡಳಿತೆ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ ಅವರು ವೇದಿಕೆಯನ್ನು ಉದ್ಘಾಟಿಸಿ ಮೂಲ್ಕಿಯ ಜನರ ಹಿತವನ್ನು ಕಾಯ್ದುಕೊಳ್ಳುವಲ್ಲಿ ವೇದಿಕೆಯ ಯೋಜನೆಗಳು ಯಶಸ್ವಿಯಾಗಲಿ ಎಂದು ಹೇಳಿದರು.

ಪ್ರಸ್ತಾವಿಕವಾಗಿ ವೇದಿಕೆಯ ಅಧ್ಯಕ್ಷ ಎನ್‌.ಪಿ.ಶೆಟ್ಟಿಯವರು ಮಾತನಾಡಿ, ಮೂಲ್ಕಿ ಪರಸರದ ಜನರ ಹಿತವನ್ನು ಕಾಯ್ದುಕೊಳ್ಳುವಲ್ಲಿ ಅಗತ್ಯ ಬಿದ್ದರೆ ಹೋರಾಟಕ್ಕೂ ವೇದಿಕೆಯು ಕಾರ್ಯಾಚರಣೆ ನಡೆಸಲು ಸಿದ್ಧ ಎಂದರು.

ಮೂಲ್ಕಿ ಚರ್ಚ್‌ನ ಧರ್ಮಗುರು ಫಾ| ಪ್ರಾನ್ಸೀಸ್‌ ಕ್ಷೇವಿಯರ್‌ ಗೋಮ್ಸ್‌, ಬಪ್ಪನಾಡು ದೇವಳ ಪ್ರಧಾನ ಅರ್ಚಕ ಶ್ರೀಪತಿ ಉಪಾಧ್ಯಾಯ, ಕಾರ್ನಾಡು ಮಸೀದಿಯ ಮಹಮ್ಮದ್‌ ಶಾಫಿ ಮಾಲವಿ ಮುಂತಾದವರು ಶುಭ ಹಾರೈಸಿ ವೇದಿಕೆಯ ಮೂಲಕ ಜನತೆಗೆ ಉತ್ತಮ ಸೇವೆ ಸಿಗುವಂತಾಗಲಿ ಎಂದರು.

Advertisement

ಮೂಲ್ಕಿ ಕೆಂಚನಕೆರೆ ಪತಾಂಜಲಿ ಯೋಗ ಕೇಂದ್ರದ ಯೋಗ ಗುರು ಜಯ ಮುದ್ದು ಶೆಟ್ಟಿ,ಹೊಸ ಅಂಗಣ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಪಿ.ಸಾಲ್ಯಾನ್‌ ಮೂಲ್ಕಿ ರಾಮಕೃಷ್ಣ ಪೂಂಜ ಐ.ಟಿ.ಐ.ನ ಪ್ರಾಂಶುಪಾಲ ವೈ  ಯಶವಂತ ಸಾಲ್ಯಾನ್‌ ಇವರನ್ನು ವೇದಿಕೆ‌ಯ ವತಿಯಿಂದ ಸಮ್ಮಾನಿಸಲಾಯಿತು.

ಅದೇ ವೇದಿಕೆಯಲ್ಲಿ ಕಿನ್ನಿಗೋಳಿ ವಿಜಯ ಕಲಾವಿದರ ವತಿಯಿಂದ ಸಮಾಜ ಸೇವಕ ಜೈ ಕರ್ನಾಟಕ ಘಟಕದ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್‌ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಅತಿಥಿಗಳಾಗಿ ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾಸಮಿತಿಯ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ,ಮೂಲ್ಕಿ ಜಿ.ಎಸ್‌.ಬಿ. ಸಭಾ ಅಧ್ಯಕ್ಷ ಸತ್ಯೇನ್ದ್ರ ಶೆಣೆ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಮಾತನಾಡಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಮೋಹನ ಶೆಟ್ಟಿ,,ಸತೀಶ್‌ ಕಿಲ್ಪಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next