Advertisement

ಮೂಕಜ್ಜಿಯ ಕನಸುಗಳು ಅತ್ಯುತ್ತಮ ಕಲಾತ್ಮಕ ಚಿತ್ರ

06:10 AM Mar 01, 2019 | Team Udayavani |

ಬೆಂಗಳೂರು: ಹನ್ನೊಂದನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ ತೆರೆ ಬಿದ್ದಿದೆ. ಕನ್ನಡದ ಕಲಾತ್ಮಕ ಚಿತ್ರ ವಿಭಾಗದಲ್ಲಿ ಪಿ.ಶೇಷಾದ್ರಿ ನಿರ್ದೇಶನದ ಮೂಕಜ್ಜಿಯ ಕನಸುಗಳು, ಜನಪ್ರಿಯ ಚಿತ್ರ ವಿಭಾಗದಲ್ಲಿ ಕೆಜಿಎಫ್- ಚಾಪ್ಟರ್‌ 1 ಪ್ರಥಮ ಬಹುಮಾನಕ್ಕೆ ಭಾಜನವಾಗಿದೆ. ಏಷಿಯನ್‌ ಸಿನೆಮಾ ವಿಭಾಗದಲ್ಲಿ ಮಲಯಾಳಂನ “ಸಿವರಂಜಿನಿಯುಂ ಇನ್ನು ಶಿಲಾ ಪೆಂಗಲುಮ್‌’ ಹಾಗೂ ಭಾರತೀಯ ಸಿನೆಮಾ ವಿಭಾಗದಲ್ಲಿ ಹಿಂದಿಯ “ಘೋಡೆ ಕೊ ಜಿಲೆಬಿ ಖೀಲಾನೆ ಲೆ ಜಾ ರಹಿ ಹೂಂ’ ಸಿನೆಮಾ ಪ್ರಶಸ್ತಿಗೆ ಪಾತ್ರವಾಗಿವೆ.

Advertisement

ಗುರುವಾರ ವಿಧಾನಸೌಧದಲ್ಲಿ ನಡೆದ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಚಲನಚಿತ್ರಗಳಿಗೆ ಎರಡು ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದ್ದು, ಕಲಾತ್ಮಕ ಚಿತ್ರಗಳಲ್ಲಿ ವಿಶಾಲ್‌ ರಾಜ್‌ ನಿರ್ದೇಶನದ “ಸಾವಿತ್ರಿಬಾಯಿ ಫ‌ುಲೆ’ ದ್ವಿತೀಯ, ಕೆ.ಶಿವರುದ್ರಯ್ಯ ನಿರ್ದೇಶನದ “ರಾಮನ ಸವಾರಿ’ ಮೂರನೇ ಸ್ಥಾನ ಪಡೆದುಕೊಂಡಿವೆ. ಮನಸೋರೆ ನಿರ್ದೇಶನದ “ನಾತಿಚರಾಮಿ’ ಚಿತ್ರಕ್ಕೆ ನೆಟ್‌ ಪ್ಯಾಕ್‌ ಇಂಟರ್‌ನ್ಯಾಷನಲ್‌ ಜ್ಯೂರಿ ಪ್ರಶಸ್ತಿ ಲಭಿಸಿದೆ.

ಜನಪ್ರೀಯ ಚಿತ್ರಗಳ ವಿಭಾಗದಲ್ಲಿ ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್ ಚಾಪ್ಟರ್‌ 1 ಪ್ರಥಮ, ರಿಷಬ್‌ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ದ್ವಿತೀಯ ಹಾಗೂ ಸೂರಿ ನಿರ್ದೇಶನದ ಟಗರು ತೃತೀಯ ಬಹುಮಾನ ಪಡೆದಿವೆ. ಭಾರತೀಯ ಸಿನಿಮಾ ವಿಭಾಗದಲ್ಲಿ ಆಸ್ಸಾಂನ “ಆಮೃತ್ಯು’ ಚಿತ್ರಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಭಾರತೀಯ ಚಿತ್ರ ವಿಭಾಗದಲ್ಲಿ “ಘೋಡೆ ಕೋ ಜಿಲೆಬಿ ಖೀಲಾನೆ ಜಾ ರಹಿ ಹೂಂ’ ಚಿತ್ರ ಆಯ್ಕೆಯಾಗಿದ್ದು, ಜ್ಯೂರಿಗಳ ಅತ್ಯುತ್ತಮ ವಿಮಶಾತ್ಮಕ ಚಿತ್ರ ಪ್ರಶಸ್ತಿಯೂ ಲಭಿಸಿದೆ.

ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ಸಿನಿಮಾ ಕಥೆ ಮತ್ತು ಚಿತ್ರಕಥೆ ಬರೆಯುವವರು, ಪ್ರೇಕ್ಷಕರು ಏನು ಬಯಸುತ್ತಾರೆ ಎನ್ನುವುದಕ್ಕಿಂತ,  ಪ್ರೇಕ್ಷರಿಗೆ ಯಾವ ರೀತಿಯ ಚಿತ್ರ ನೀಡಿ ಪರಿವರ್ತಿಸಲು ಸಾಧ್ಯ ಎನ್ನುವುದರ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.

ಸಂಸಾರ ನಿಭಾಯಿಸುವುದು ಕಷ್ಟ: ಭಾರತೀಯ ಚಿತ್ರಗಳು ಆಸ್ಕರ್‌ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ನಿರ್ದೇಶಕರು ಪರಿಶ್ರಮ ಪಡಬೇಕು. ಒಮ್ಮೆ ಪ್ರಶಸ್ತಿ ಪಡೆದವರು ಮತ್ತೆ ಪ್ರಶಸ್ತಿ ಪಡೆಯುವುದು ತುಂಬಾ ಕಷ್ಟದ ಕೆಲಸ. ಮದುವೆಯಾಗುವುದು ಸುಲಭ, ಸಂಸಾರ ನಿಭಾಯಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಆದರೆ, ಪರಿಶ್ರಮ ಪಟ್ಟರೆ ಎಲ್ಲವನ್ನೂ ಸುಲಭವಾಗಿ ನಿಭಾಯಿಸಬಹುದು ಎಂದು ಹೇಳಿದರು.

Advertisement

ಪೋಲೆಂಡ್‌ನ‌ ಖ್ಯಾತ ನಿರ್ದೇಶಕ ಕ್ರಿಸ್ಟಾಫ್ ಝಾನುಸಿ ಮಾತನಾಡಿ, ವಿಶ್ವದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಶಾಂತಿ ಸಾರುವ ಅಗತ್ಯವಿದೆ. ಚಿತ್ರರಂಗದ ಮೂಲಕ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ನಾಗತಿಹಳ್ಳಿ ಚಂದ್ರಶೇಖರ್‌, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ ಉಪಸ್ಥಿತರಿದ್ದರು. ಕಲಾತ್ಮಕ ನಿರ್ದೇಶಕ ಎನ್‌.ವಿದ್ಯಾಶಂಕರ್‌ ಪ್ರಶಸ್ತಿಗಳ ಘೋಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next