Advertisement

ಸಂಸ್ಕೃತಿ ಹೆಸರಲ್ಲಿ ಮೌಡ್ಯ ಪೋಷಣೆ

11:34 AM Oct 27, 2018 | |

ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಮೌಡ್ಯ ಹಾಗೂ ಜಾತಿ ವ್ಯವಸ್ಥೆಯನ್ನು ಪೋಷಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಂಸ್ಕೃತಿಯನ್ನು ಉದಾರವಾಗಿ ನೋಡುವುದನ್ನು ಬಿಡಬೇಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್‌ ಹೇಳಿದರು. 

Advertisement

ನಗರದ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಿಂದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಜಾನಪದ ಮತ್ತು ಜಾಗತೀಕರಣ: ಸಾಂಸ್ಕೃತಿಕ ಪಲ್ಲಟಗಳು’ ವಿಷಯ  ಕುರಿತು ಅವರು ಉಪನ್ಯಾಸ ನೀಡಿದರು.

ಸಂಸ್ಕೃತಿಗಳೇ ಮೂಗುದಾರ: ನಾಗರಿಕತೆ ಎಂಬುದು ಚಲನಶೀಲವಾಗಿದೆ. ಹೊಸದನ್ನು ಕಂಡುಕೊಂಡು ಜೀವನ ನಡೆಸುವಂತದ್ದಾಗಿದೆ. ಅಖಂಡತೆ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳೆದು ಬಂದಿರುವ ನಾಗರಿಕತೆಯನ್ನು ನಾವು ಆಧುನಿಕತೆ ಎಂದೂ ಕರೆಯುತ್ತೇವೆ. ಈ ಹಿನ್ನೆಲೆಯಲ್ಲಿ ಆಧುನಿಕತೆ, ನಾಗರಿಕತೆ, ಚಲನಶೀಲತೆಗಳು ಒಂದೇ ಪರಿಣಾಮ ಬೀರಲಾರದು.

ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿಗಳೇ ನಮ್ಮ ಮೂಗುದಾರವಾಗಿದೆ. ಸಂಸ್ಕೃತಿಯ ಹೆಸರಿನಲ್ಲಿ ಅನೇಕ ಮೂಗುದಾರಗಳನ್ನು ಆಯಾ ಜಾತಿಗಳಿಗೆ ಹಾಕಿ, ಧಾರ್ಮಿಕತೆ ಹೆಸರಲ್ಲಿ ಬಂಧಿಸಲಾಗುತ್ತಿದೆ. ಇನ್ನಾದರೂ ಸಂಸ್ಕೃತಿಯನ್ನು ಉದಾರವಾಗಿ ನೋಡುವುದನ್ನು ಬಿಡಬೇಕಿದೆ ಎಂದರು.

ವಿಮಶಾತ್ಮಕವಾಗಿ ನೋಡಿ: ಅಲ್ಲದೇ ವಿವಿಧ ಕಾರಣಗಳಿಂದಾಗಿ ನಾವು ನಮ್ಮದಲ್ಲದ ಸಂಸ್ಕೃತಿಯನ್ನು ಧರ್ಮದ ಹೆಸರಲ್ಲಿ ಒಪ್ಪಿಕೊಳ್ಳುವಂತಾಗಿದೆ. ಜಾತಿ ವ್ಯವಸ್ಥೆಯೊಂದಿಗೆ ಬಂದಿರುವ ಈ ಸಂಸ್ಕೃತಿಗಳನ್ನು ನಾವೆಷ್ಟು ಇಟ್ಟುಕೊಳ್ಳಬೇಕಿತ್ತು? ಬೆತ್ತಲೆ ಸೇವೆ, ಎಲ್ಲವ್ವನ ಪದಗಳು ಇದರಲ್ಲಿ ಯಾವುದನ್ನು ಸಮರ್ಥಿಸುತ್ತಿವೆ?

Advertisement

ಮಾರಮ್ಮನ ಹಬ್ಬದ ಕೋಣದ ಬಲಿ ಯಾವ ಮೌಲ್ಯವನ್ನು ಪ್ರತಿಪಾದಿಸುತ್ತದೆ? ಇವು ನಮ್ಮ ಸಂಸ್ಕೃತಿಯಲ್ಲ. ಹೀಗಾಗಿ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದ ಅವರು, ಭಾರತೀಯ ಸಂಸ್ಕೃತಿ ಯಾವುದೆಂದು ಬಿಡಿಸಿ ನೋಡಿದಾಗ ಇವೆಲ್ಲವೂ ಸರಿಯಾಗಿ ಕಾಣಲಿದ್ದು, ಸಂಸ್ಕೃತಿಗಳನ್ನು ನಾವು ಬಹಳ ವಿಮಶಾìತ್ಮಕವಾಗಿ ನೋಡಬೇಕಿದೆ ಎಂದು ಹೇಳಿದರು. 

ಮಾನವೀಯತೆ: ದೇಶಕ್ಕೆ ಸಂವಿಧಾನವನ್ನು ನೀಡಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಂತಹ ಮೇರು ವ್ಯಕ್ತಿಗೆ ದಲಿತ ಸಂಸ್ಕೃತಿ ಎಂದರೆ ಗೊತ್ತಿರಲಿಲ್ಲವೆಂದಲ್ಲ. ಆದರೆ ಅವರು ಯಾಕೆ ಆ ಕುರಿತು ಹೆಚ್ಚು ಮಾತನಾಡದೆ, ಈ ಸಂಸ್ಕೃತಿ ನಮ್ಮವಲ್ಲ ಎಲ್ಲರೂ ಇದರಿಂದ ಹೊರಗೆ ಬನ್ನಿ ಎನ್ನುತ್ತಾರೆ. ಆದ್ದರಿಂದ ನಾವು ನಮ್ಮ ಸಾಂಸ್ಕೃತಿಕ ಕನ್ನಡಿಗಳನ್ನು ಛಿದ್ರಗೊಳಿಸಬೇಕಾದ ಅಗತ್ಯವಿದ್ದು, ಬದಲಿಗೆ ಅಖಂಡ ಮಾನವನನ್ನು ತೋರುವ ಕನ್ನಡಿ ಬೇಕಿದೆ.

ಈ ಎಲ್ಲಾ ಕಾರಣದಿಂದ ಬಾಬಾ ಸಾಹೇಬರು ಅಖಂಡ ಮಾನವೀಯತೆ ಪ್ರತಿಬಿಂಬಿಸುವ ಸಂವಿಧಾನ ಕೊಟ್ಟಿದ್ದರೂ, ಅದನ್ನೇ ಒಡೆಯುವ ನಿಟ್ಟಿನಲ್ಲಿ ಹುನ್ನಾರ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎನ್‌.ಎಂ.ತಳವಾರ, ಜಾನಪದ ಅಧ್ಯಯನ ಮಂಡಳಿ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು, ಕೈಲಾಶ್‌ ಮೂರ್ತಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next