ಗೌರಿಬಿದನೂರು: ತಾಲೂಕಿನಿಂದ ದೊಡ್ಡಬಳ್ಳಾಪುರ ತಾಲೂಕಿನವರೆಗೆ ತೊಂಡೇಭಾವಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೆಪಿಟಿಸಿಎಲ್‌ನಿಂದ ವಿದ್ಯುತ್ ಲೈನ್ ಅಳವಡಿಸಲು ಮಾಡಬೇಕಾದ ಭೂಸ್ವಾಧೀನವಾಗುವ ಜಮೀನಿನ ಮಾಲೀಕರಿಗೆ ಹರಿಹಾರ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಾಜಣ್ಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ರೈತರ ಸಭೆಯು ವಿಫಲವಾಗಿದೆ.
ಸರ್ಕಾರ ಈಗ ನಿಗದಿಪಡಿಸಿರುವ ದರ ಅವೈಜ್ಞಾನಿಕವಾಗಿದ್ದು, ಜಿಲ್ಲಾಧಿಕಾರಿಗಳೇ ಸಭೆ ನಡೆಸಿ ಇನ್ನೂ ಹೆಚ್ಚಿನ ಬೆಲೆ ನಿಗದಿ ಮಾಡಬೇಕೆಂದು ಈ ಭಾಗದ ರೈತರು ಆಗ್ರಹಿಸಿ ಸಭಾತ್ಯಾಗ ಮಾಡಿದ್ದರಿಂದ ತಹಶೀಲ್ದಾರ್ ಸಭೆಯನ್ನು ಮುಕ್ತಾಯಗೊಳಿಸಿದರು. ರೈತರ ಪರವಾಗಿ ಮಾತನಾಡಿದ ಸೂಲಪಾಣಿ, ತೊಂಡೇಭಾವಿ ಹೋಬಳಿ ಬೇವಿನಹಳ್ಳಿ ಸರ್ವೆ ನಂ.55ರ ಅರಣ್ಯ ಭೂಮಿಯಲ್ಲಿ ವಿದ್ಯುತ್ ತಂತಿ ಸಂಪರ್ಕ ಅಳವಡಿಸಿ ಎಂದು ಆಗ್ರಹಿಸಿದಾಗ
ಅದಕ್ಕೆ ಉತ್ತರಿಸಿದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರ್ವಾಹ ಅಭಿಯಂತರರಾದ ಶುಭ, ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಅಳವಡಿಸಲು ನಮಗೆ ಅಧಿಕಾರವಿಲ್ಲ. ತಂತ್ರಜ್ಞರ ತಂಡ ಈ ತಾಂತ್ರಿಕ ಮಾರ್ಗವನ್ನು ನಿಗದಿ ಮಾಡಿದ್ದು 3 ವರ್ಷಗಳಾಗಿವೆ ಎಂದರು. ತಹಶೀಲ್ದಾರ್ ಮಾತನಾಡಿ, ಸರ್ಕಾರ ದರಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಿನ ಬೆಲೆಯನ್ನು ಪರಿಹಾರವಾಗಿ ನೀಡುತ್ತಿದ್ದು,
ಪ್ರತಿ ಚದರ ಅಡಿಗೆ ನೋಂದಣಾಧಿಕಾರಿಗಳ ನಿಗದಿತ ಬೆಲೆಯಂತೆ ಕೇವಲ 852. ಆದರೆ ಸರ್ಕಾರ ಆ ದರಕ್ಕಿಂತಲೂ ನಾಲ್ಕುಪಟ್ಟು 3600 ರೂ. ಹಾಗೂ ವಿದ್ಯುತ್ ತಂತಿ ಹಾದು ಹೋಗಿರುವುದಕ್ಕೆ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಲು ನಿಗದಿ ಪಡಿಸಿದೆ ಎಂದರು. ತಹಶೀಲ್ದಾರ್ ರಾಜಣ್ಣ, ಸಭೆಯ ಬಗ್ಗೆ ಉಪವಿಭಾಗಾಧಿ ಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿದರು. ರೈತ ಮುಖಂಡರಾದ ದಿವಾಕರ ಗೌಡ, ಲಿಂಗಣ್ಣ, ವೆಂಕಟರಾಮರೆಡ್ಡಿ, ಸೂಪಾಣಿ, ಎಇಇ ರತ್ನ, ತನಿಖಾಧಿಕಾರಿ ಜಯಪ್ರಕಾಶ್ ಆರಾಧ್ಯ, ತಾಪಂ ನರೇಗಾ ಸಹಾಯಕ ನಿರ್ದೇಶಕ ಚಿನ್ನಪ್ಪ ಉಪಸ್ಥಿತರಿದ್ದರು.