Advertisement
ಮೂಡುಬೆಳ್ಳೆ ಮುಖ್ಯ ರಸ್ತೆ ಮೂಲಕ ಉಡುಪಿ- ಕಾರ್ಕಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಹಾದುಹೋಗುತ್ತದೆ. ಕಾರ್ಕಳ-ಪಳ್ಳಿ ಒಳಬದಿಯಿಂದ, ಶಿರ್ವ-ಮಟ್ಟಾರ್ ಬದಿಯಿಂದ ಉಡುಪಿಗೆ ಹೋಗುವ ವಾಹನಗಳು, ಉಡುಪಿಯಿಂದ ಆ ಕಡೆಗೆ ತೆರಳುವ ವಾಹನಗಳು ಮೂಡುಬೆಳ್ಳೆ ಪೇಟೆ ಮಾರ್ಗವಾಗಿಯೇ ಸಂಚರಿಸುತ್ತವೆ. ಪಳ್ಳಿ, ಬೈಲೂರು, ಕಾರ್ಕಳ ಬದಿಯಿಂದ ಕ್ರಶ್ಶರ್, ಜಲ್ಲಿ, ಪಾದೆಕಲ್ಲು ಹೊತ್ತು ತರುವ ಟಿಪ್ಪರ್, ಲಾರಿಗಳೂ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಅಲ್ಲದೆ ಬಸ್, ಶಾಲಾ ವಾಹನಗಳು, ಖಾಸಗಿ ವಾಹನಗಳ ಸಂಚಾರದಿಂದ ಅಗಲ ಕಿರಿದಾದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಈ ರಸ್ತೆಯಲ್ಲಿ ಕೆಲವೊಂದು ವಾಹನಗಳು, ಬಸ್ಸುಗಳು ನಿಯಮ ಉಲ್ಲಂಘನೆ ಮಾಡುವುದರಿಂದ ಸಂಚಾರ ಅಡಚಣೆ ಉಂಟಾಗುತ್ತಿದೆ.
ಬೆನ್ನಿಗೇ ನಿಯಮಗಳಿಗೂ ಗುಡ್‌ಬೈ
ಹಿಂದೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಅಶೋಕ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೂಡುಬೆಳ್ಳೆಯ ಸಂಚಾರ ಅಡಚಣೆ ನಿವಾರಿಸಲು ಕ್ರಮ ಕೈಗೊಂಡು ಮಾದರಿ ಎನಿಸಿದ್ದರು. ಅವರು ಪದೋನ್ನತಿಯೊಂದಿಗೆ ವರ್ಗವಾಗಿ ತೆರಳಿದ ಬಳಿಕ ಅವರು ವಿಧಿಸಿದ್ದ ನಿಯಮಗಳು ಅವರ ಹಿಂದೆಯೇ ಹೋಗಿದ್ದು ವಿಪರ್ಯಾಸ. ಅವರು ರಸ್ತೆಯ ಏಕಪಾರ್ಶ್ವದಲ್ಲಿ ಪಾರ್ಕಿಂಗ್ ನಿಯಮ ಜಾರಿಗೊಳಿಸಿದ್ದರು. ಚರ್ಚ್ ದ್ವಾರದ ಬಳಿ ಬಸ್‌ಗಳನ್ನು ತಿರುಗಿಸುವುದು ಮತ್ತು ಮುಖ್ಯ ರಸ್ತೆಯಲ್ಲಿ ನಿಲುಗಡೆ ಮಾಡುವುದನ್ನು ನಿಷೇಧಿಸಿದ್ದರು. ಬಸ್ಸುಗಳು ಸಮಯ ಪಾಲಿಸಲಿ
ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ಸುಗಳು ಮೇಲ್ಪೇಟೆ ಹಾಗೂ ಬಸ್ ಸ್ಟಾಂಡ್ ಬಳಿ ನಿಗದಿತ ಸಮಯಕ್ಕೂ ಮೀರಿ ನಿಲುಗಡೆಯಾಗುವುದು ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬಸ್‌ಗಳನ್ನು ಅವಧಿ ಮೀರಿ ನಿಲ್ಲಿಸುವುದರಿಂದ ಹಾಗೂ ಚರ್ಚ್ ದ್ವಾರದ ಬಳಿ ತಿರುಗಿಸುವುದರಿಂದ ಅಗಲ ಕಿರಿದಾದ ರಸ್ತೆಯಲ್ಲಿ ಸಂಚಾರ ಅಡಚಣೆ ಉಂಟಾಗುತ್ತಿದೆ. ಬಸ್‌ಸ್ಟಾಂಡ್ ಬಳಿ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುವುದರಿಂದ ಮತ್ತು ಕೆಲವೊಮ್ಮೆ ಬಸ್‌ಗಳ ನಡುವಿನ ಪೈಪೋಟಿಯಿಂದ ಬಸ್‌ಗಳನ್ನು ಮೂಡುಬೆಳ್ಳೆ-ಪಾಂಬೂರು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗುತ್ತಿದೆ. ಇದರಿಂದ ಆ ರಸ್ತೆ ಸಹಿತ ಮುಖ್ಯ ರಸ್ತೆಯೂ ಬ್ಲಾಕ್ ಆಗುತ್ತದೆ. ಬಸ್‌ಸ್ಟಾಂಡ್‌ನಲ್ಲಿ ಬಸ್‌ಗಳು ಅವಧಿ ಮೀರಿ ನಿಲುಗಡೆಯಾಗುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಶಾಲಾ ವಾಹನಗಳು ಸಂಚರಿಸುವಾಗ ಈ ರೀತಿಯ ಅಡಚಣೆ ಅಪಾಯದ ಆಹ್ವಾನವೆಂಬಂತಿದೆ.
Related Articles
ಒಬ್ಬರ ತಪ್ಪಿನಿಂದ ಹಲವರಿಗೆ ತೊಂದರೆ
ಅಗಲ ಕಿರಿದಾದ ಸಂಚಾರವ್ಯಸ್ತ ಮೂಡುಬೆಳ್ಳೆ ರಸ್ತೆ ಯಲ್ಲಿ ಕೇವಲ ಒಂದು ವಾಹನ ನಿಯಮ ಮೀರಿ ಪಾರ್ಕಿಂಗ್ ಮಾಡಿದ್ದಲ್ಲಿ ಇಡೀ ರಸ್ತೆಯೇ ಬ್ಲಾಕ್ ಆಗಿ ಸಮಸ್ಯೆಯಾಗುತ್ತದೆ. ಪೇಟೆಯಿಂದ ಹೊರ ಬರಲು ಬೇರೆ ದಾರಿಯೇ ಇಲ್ಲದಿರುವಾಗ ಒಬ್ಬರ ತಪ್ಪಿನಿಂದ ಹಲವರು ಪರಿ ತಪಿಸಬೇಕಾಗುತ್ತದೆ. ವಾಹನ ಚಾಲಕರು ಸ್ವಲ್ಪ ವಿವೇಚನೆಯಿಂದ ವರ್ತಿಸಿದರೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿರುತ್ತದೆ.
ಪೊಲೀಸರಿಂದ ಪ್ರತ್ಯುತ್ತರವಷ್ಟೇ; ಕ್ರಮವಿಲ್ಲ
ಮೇಲ್ಪೇಟೆ ಹಾಗೂ ಬಸ್‌ಸ್ಟಾಂಡ್‌ನಲ್ಲಿ ಬಸ್‌ಗಳು ಅವಧಿ ಮೀರಿ ನಿಲುಗಡೆಯಾಗುವುದರಿಂದ ಟ್ರಾಫಿಕ್ ಜಾಂ ಉಂಟಾಗುವುದು ಮತ್ತು ಅಪಘಾತದ ಸಂಭಾವ್ಯತೆಗಳಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಶಿರ್ವ ಪೊಲೀಸರಿಗೆ ಸಾರ್ವಜನಿಕರು ದೂರು ಅರ್ಜಿ ಮೂಲಕ ಮನವಿ ಮಾಡಿದ್ದರು. ಆದರೆ ಈ ದೂರಿಗೆ ಪೊಲೀಸರು ಕೇವಲ ಪ್ರತ್ಯುತ್ತರ ನೀಡಿದ್ದು, ಕ್ರಮ ತೆಗೆದುಕೊಂಡಿಲ್ಲ. ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯ ನಿಯಮ ಉಲ್ಲಂಘನೆ ಯಾಗಿದ್ದು, ಇಲಾಖೆ ಈ ಬಗ್ಗೆ ಗಮನಿಸಬೇಕಿದೆ.
Advertisement
ಪೊಲೀಸರು, ಸ್ಥಳೀಯಾಡಳಿತ ಟ್ರಾಫಿಕ್ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ತತ್‌ಕ್ಷಣ ಕಾರ್ಯಪ್ರವೃತ್ತಗೊಂಡು ಕ್ರಮ ಜರಗಿಸುವುದರಿಂದ ಸಂಭಾವ್ಯ ಅಪಾಯ ಹಾಗೂ ಸಾರ್ವಜನಿಕರಿಗಾಗುವ ತೊಂದರೆಯನ್ನು ಪರಿಹರಿಸಬಹುದಾಗಿದೆ.
ಘನ ವಾಹನಗಳು ಉಪರಸ್ತೆಯಲ್ಲಿ ತೆರಳಲಿಸಂಚಾರ ದಟ್ಟಣೆ ಕಡಿಮೆ ಮಾಡಲು ಘನ ವಾಹನಗಳು ಮೂಡುಬೆಳ್ಳೆ ಮುಖ್ಯಪೇಟೆ ಪ್ರವೇಶಿಸದೆ ಲಯನ್ಸ್ ಕ್ಲಬ್- ಬಬ್ಬರ್ಯ ಕೆರೆ- ಗಣಪನ ಕಟ್ಟೆ ಉಪರಸ್ತೆಯ ಮೂಲಕ ತೆರಳುವುದನ್ನು ಕಡ್ಡಾಯ ಗೊಳಿಸಿದರೆ ಮೂಡುಬೆಳ್ಳೆ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ದೊರಕಿದಂತೆ. ಉಭಯ ಬದಿಯಿಂದ ಬರುವ ಘನ ವಾಹನಗಳಿಗೂ ಈ ಉಪ ರಸ್ತೆ ಪೂರಕವಾಗಿದೆ. ಕೂಡು ರಸ್ತೆಯಲ್ಲಿ ಬಸ್‌ಸ್ಟಾಂಡ್ ಇರುವುದು ಟ್ರಾಫಿಕ್ ಜಾಂಗೆ ಪ್ರಮುಖ ಕಾರಣ. – ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಚಿತ್ರ: ಶ್ರೀಧರ್ ಶೆಟ್ಟಿಗಾರ್, ಐಡಿಯಲ್