Advertisement

ಮೂಡಲಗಿ: ಲೋಕ್‌ ಅದಾಲತ್‌ನಲ್ಲಿ ಒಂದಾದ ಜೋಡಿಗಳು

06:36 PM Jul 10, 2023 | Team Udayavani |

ಮೂಡಲಗಿ: ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆ ತವರು ಮನೆ ಸೇರಿ ಜೀವನಾಂಶ ನೀಡುವಂತೆ ಕೋರ್ಟ್‌ ಮೆಟ್ಟಿಲೇರಿದ ಎರಡು ಜೋಡಿಗಳು ಶನಿವಾರ ಮೂಡಲಗಿಯ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ್‌ ಅದಾಲತ್‌ನಲ್ಲಿ ಮತ್ತೆ ಒಂದಾಗಿರುವ ಘಟನೆ ನಡೆದಿದೆ.

Advertisement

ಪಟ್ಟಣದಲ್ಲಿ ಶನಿವಾರ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಲೋಕ್‌ ಅದಾಲತ್‌ ನಲ್ಲಿ ಪತ್ನಿ ಬಸವ್ವ ಹೆಗಡೆ ತನ್ನ ಪತಿ ವಿಠಲ ಹೆಗಡೆ ಮೇಲೆ ಜೀವನಾಂಶ ನೀಡಬೇಕೆಂದು ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಮತ್ತು ಪತ್ನಿ ಸ್ನೇಹಾ ಯಾದವ್‌ ತನ್ನ ಪತಿ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.

ಆದರೆ ನ್ಯಾಯಾಧೀಶರ ಸಲಹೆ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡ-ಹೆಂಡತಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ನಿರ್ಧರಿಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಅವರ ಸಮ್ಮುಖದಲ್ಲಿ ಮತ್ತೆ ಒಟ್ಟಿಗೆ ಸಂಸಾರ ಮಾಡುವ ಸಂಕಲ್ಪದೊಂದಿಗೆ ಹಾರ ಬದಲಿಸಿಕೊಂಡರು.

ನ್ಯಾಯಾಧೀಶೆ ಜ್ಯೋತಿ ಪಾಟೀಲ ಮಾತನಾಡಿ, 32 ಚಿಕ್ಕ ಪ್ರಕರಣಗಳಲ್ಲಿ 31 ಪ್ರಕರಣಗಳು ಇತ್ಯರ್ಥಗೊಂಡು ಸುಮಾರು 49 ಲಕ್ಷ ರೂ. ಹಣವನ್ನು ರಿಕವರಿ ಮಾಡಿಕೊಡಲಾಗಿದೆ. ಜಮೀನು ವಿವಾದ 30 ಪ್ರಕರಣಗಳಲ್ಲಿ 29 ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ ಕ್ರಿಮಿನಲ್‌ 1194 ಪ್ರಕರಣಗಳಲ್ಲಿ 1190 ಪ್ರಕರಣಗಳು ಇತ್ಯರ್ಥಗೊಂಡು ಸುಮಾರು 1 ಲಕ್ಷ ದಂಡ ವಿಧಿಸಲಾಗಿದೆ. ಕಂದಾಯ ಇಲಾಖೆ ಮತ್ತು ಇತರರ ತೆರಿಗೆಗಳಿಗೆ(ಪಿಎಲ್‌ಟಿ) ಸಂಬಂಧಪಟ್ಟಂತೆ ಸುಮಾರು 36 ಕೋಟಿ ಸಂಧಾನವಾಗಿದೆ.

ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ದಾಖಲಾತಿ 104 ಪ್ರಕರಣಗಳಲ್ಲಿ 103 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಶನಿವಾರ ನಡೆದ ಲೋಕ್‌ ಅದಾಲತ್‌ದಲ್ಲಿ 1377 ಪ್ರಕರಣಗಳಗೆ ಸಂಬಂಧಿಸಿದಂತೆ 1369 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹೇಳಿದರು.

Advertisement

ಲೋಕ ಅದಾಲತ್‌ನಲ್ಲಿ ಸಾರ್ವಜನಿಕರು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಸಮಯ ಹಾಗೂ ತಮ್ಮ ಖರ್ಚುವೆಚ್ಚ ಉಳಿಯುವುದರೊಂದಿಗೆ ಸಮಾಜದಲ್ಲಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next