ಮೂಡಬಿದಿರೆ: ಪಡಿತರ ಅವ್ಯವಸ್ಥೆಯನ್ನು ಸರಿಪಡಿಸಬೇಕು, ಕುಡಿಯುವ ನೀರು ಒದಗಿಸಬೇಕು ಎಂದು ಆಗ್ರಹಿಸಿ ಹಾಗೂ ಗ್ಯಾಸ್ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಮೂಡಬಿದಿರೆ ಸಿಪಿಐ(ಎಂ)ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಸಿಪಿಐ(ಎಂ) ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರವೂ ಬೆಲೆಯನ್ನು ಏರಿಕೆ ಮಾಡುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ ಆರ್ಥಿಕ ನೀತಿ ಒಂದೇ ಎಂಬುದನ್ನು ಸಾಬೀತು ಪಡಿಸಿದೆ ಎಂದು ಆರೋಪಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಪೇ ಪದೇ ಇಳಿಮುಖವಾಗುತ್ತಿದ್ದರೂ, ಕೇಂದ್ರ ಸರಕಾರವು ಅಧಿಕಾರಕ್ಕೆ ಬಂದಂದಿನಿಂದ ಅವುಗಳ ಬೆಲೆಯನ್ನು ಏರಿಸುತ್ತಲೇ ಬಂದಿದೆ. ರೇಶನ್ ಸಹಿತ ಇತರ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಲೇ ಇರುವುದರಿಂದ ಸಾಮಾನ್ಯ ಜನರಿಗೆ ದಿನ ಬಳಕೆಯ ವಸ್ತು ಗಳನ್ನು ಕೊಂಡುಕೊಳ್ಳಲು ಕಷ್ಟಧಿವಾಗುತ್ತಿದೆ’ ಎಂದರು.
ಪ್ರಾರಂಭದಲ್ಲಿ ಪಕ್ಷದ ಕಚೇರಿಯಿಂದ ಹೊರಟ ಮೆರವಣಿಗೆ ಪೇಟೆಯ ಮೂಲಕ ಹಾದು ತಹಶೀಲ್ದಾರರ ಕಚೇರಿ ತಲುಪಿತು.
ಸಿಪಿಐ (ಎಂ) ಮುಖಂಡರಾದ ರಮಣಿ, ರಾಧಾ, ಗಿರಿಜಾ, ತಸ್ರಿಫ್, ಸುಂದರ, ಲಕ್ಷ್ಮೀ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.