ಮೂಡುಬಿದಿರೆ: ಸಾವಿರ ಕಂಬದ ಬಸದಿಯಲ್ಲಿ 2019ರ ಜುಲೈ 1ರಂದು ಕಳವಿಗೆ ಯತ್ನಿಸಿದ ಆರೋಪಿ ಪುನೀತ್ ಶೆಟ್ಟಿಗೆ ಮೂಡುಬಿದಿರೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಸತತ ಮೂರು ವರ್ಷ ಎರಡು ತಿಂಗಳುಗಳಿಂದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಸದ್ಯ ಜಾಮೀನು ಸಿಕ್ಕಿದೆ.
ಪ್ರಕರಣದ ವಿವರ
2019ರ ಜುಲೈ 1 ರಂದು ತಡರಾತ್ರಿ ಸಾವಿರ ಕಂಬದ ಬಸದಿಗೆ ನುಗ್ಗಿ ಬಸದಿಯ ಒಳಗಡೆ ಇದ್ದ ಆರು ಬೀಗಗಳನ್ನು ಒಡೆದು ಕಳವಿಗೆ ಯತ್ನಿಸಿದ ಘಟನೆ ಮರುದಿನ ಮುಂಜಾನೆ ಬಸದಿಯ ಸಿಬಂದಿಗಳಿಗೆ ಘಟನೆ ಬೆಳಕಿಗೆ ಬಂದಿತ್ತು. ಬಸದಿ ಮೊಕ್ತೇಸರ ಪಟ್ಣಶೆಟ್ಟಿ ವಸುದೇಶ್ ಕುಮಾರ್ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಸುಮಾರು ಒಂದು ತಿಂಗಳ ಬಳಿಕ ಆರೋಪಿ ಪುನೀತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಆರೋಪಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಆರೋಪಿಗೆ ಸಂಬಂಧಿಕರೂ ಯಾರೂ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಈತನ ಪರ ಯಾರೂ ಬಿಡುಗಡೆಗೆ ಪ್ರಯತ್ನಿಸದ ಕಾರಣ ಈತ ಬಂಧನದ ಬಳಿಕ ಈ ವರೆಗೂ ಜೈಲಿನÇÉೇ ಕಳೆಯುವಂತಾಗಿತ್ತು.
ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲ ಆನಂದ ಕೆ. ಶಾಂತಿನಗರ ಮತ್ತು ವಕೀಲ ವೇಣುಗೋಪಾಲ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಮಾನಸಿಕ ಅಸ್ವಸ್ಥನಾಗಿರುವ ಆರೋಪಿ ಮೂಡುಬಿದಿರೆ ಪರಿಸರದಲ್ಲಿ ಚಿರಪರಿಚಿತ ಯುವಕನಾಗಿದ್ದ.
Related Articles
ಅನುಭವಿಸಿ ಮುಗಿದ ಶಿಕ್ಷೆ
ಆರೋಪಿಗೆ ಜಾಮೀನು ದೊರೆತರೂ ಭದ್ರತೆ ನೀಡಲು ಯಾರೂ ಮುಂದೆ ಬರದ ಕಾರಣ ಮತ್ತು ಈಗಾಗಲೇ ಆರೋಪಿ ಮೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಕಳೆದಿರುವುದರಿಂದ ಬಸದಿ ಕಳವು ಯತ್ನ ಪ್ರಕರಣದಲ್ಲಿ ವಿಧಿಸಬಹುದಾದ ಶಿಕ್ಷೆಯ ಅವಧಿಯನ್ನು ಅನುಭವಿಸಿ ಮುಗಿಸಿದ್ದಾನೆ. ಹೀಗಾಗಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಆರೋಪಿ ಪರ ವಕೀಲರು ತಿಳಿಸಿದ್ದಾರೆ.