Advertisement

‘ಗೇರು ಬೆಳೆಯಿಂದ ಆರ್ಥಿಕ ಲಾಭ’

11:25 AM Sep 07, 2018 | Team Udayavani |

ಮೂಡಬಿದಿರೆ: ‘ಗೇರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮುತುವರ್ಜಿ ವಹಿಸಿ ಬೆಳೆಸಿದಲ್ಲಿ ಆರ್ಥಿಕ ಮಟ್ಟವನ್ನು ಹೆಚ್ಚಿಸಲು ಸಾಧ್ಯ. ನಿಗಮದ ನರ್ಸರಿಗಳಲ್ಲಿ ಉತ್ತಮ ತಳಿಯ ಕಸಿ ಗೇರು ಗಿಡಬೆಳೆಸಿ, ಆಸಕ್ತ ಬೆಳೆಗಾರರಿಗೆ ನೀಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಅವರು ಹೇಳಿದರು. 

Advertisement

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವತಿಯಿಂದ ಮೂಡಬಿದಿರೆಯ ಅರಣ್ಯ ಸಂಕೀರ್ಣದಲ್ಲಿರುವ ಅರಣ್ಯ ಇಲಾಖೆಯ ಪ್ರಕೃತಿ ಚಿಕಿತ್ಸಾ ತರಬೇತಿ ಕೇಂದ್ರದಲ್ಲಿ ರೈತರಿಗೆ ಹಾಗೂ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ನಡೆದ ಗೇರು ಕೃಷಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಎಸ್‌. ನೆಟಾಲ್ಕರ್‌ ಅಧ್ಯಕ್ಷತೆ ವಹಿಸಿ ಸಾಂಕೇತಿಕವಾಗಿ ಪ್ರಗತಿಪರ ರೈತರಿಗೆ ಕಸಿಗೇರು ಗಿಡಗಳನ್ನು ವಿತರಿಸಿದರು.

ಸಮ್ಮಾನ
ಪ್ರಗತಿಪರ ಗೇರು ಕೃಷಿಕ ಹಾಗೂ ಮಾಜಿ ಸೈನಿಕ ಜಯ ಶೆಟ್ಟಿ ಬೆಳುವಾಯಿ ಅವರನ್ನು ನಿಗಮದ ವತಿಯಿಂದ ಸಮ್ಮಾನಿಸಲಾಯಿತು. ಪುತ್ತೂರು ವಿಭಾಗದ ನೆಡುತೋಪು ಅಧೀಕ್ಷಕ ಸುರೇಶ್‌ ಸಮ್ಮಾನ ಪತ್ರವಾಚಿಸಿದರು. ಕುಂದಾಪುರ ವಿಭಾಗದ ನೆಡುತೋಪು ಅಧಿಧೀಕ್ಷಕ ರವಿರಾಜ್‌ ಸ್ವಾಗತಿಸಿದರು. ಕುಮಟಾ ವಿಭಾಗದ ನೆಡುತೋಪು ಅಧೀಕ್ಷಕ ಮಲ್ಲಪ್ಪ ನಿರೂಪಿಸಿದರು. ಪುತ್ತೂರು ಗೇರು ಸಂಶೋಧನ ನಿರ್ದೇಶಕ ಡಾ| ಎಂ. ಗಂಗಾಧರ ನಾಯಕ್‌ ಪ್ರಸ್ತಾವನೆಗೈದರು. ಮೂಡಬಿದಿರೆ ನೆಡುತೋಪು ವಿಭಾಗದ ಅಧೀಕ್ಷಕ ಮುರಳೀಧರನ್‌ ಉಪಸ್ಥಿತರಿದ್ದರು.

ಮಾಹಿತಿ, ಸಂವಾದ
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪುತ್ತೂರು ಗೇರು ಸಂಶೋಧನ ನಿರ್ದೇಶನಾಲಯದ ನಿರ್ದೇಶಕ ಡಾ| ಎಂ. ಗಂಗಾಧರ ನಾಯಕ್‌, ಗೇರು ಕೃಷಿಯ ಬಗ್ಗೆ ಮಾಹಿತಿ ನೀಡಿ, ಗೇರು ತಳಿಗಳ ಬಗ್ಗೆ ಮತ್ತು ಯಾವ ಮಣ್ಣಿಗೆ ಯಾವ ತಳಿ ಸೂಕ್ತ ಎಂದು ವಿವರಿಸಿದರು. ಪುತ್ತೂರು ಗೇರು ಸಂಶೋಧನ ನಿರ್ದೇಶನಾಲಯದ ವಿಜ್ಞಾನಿ ಮುರಳೀಧರ್‌ ಅವರು ಗೇರು ಮರಗಳಿಗೆ ಬರುವ ವಿವಿಧ ಕೀಟಗಳ ಹಾವಳಿ ಮತ್ತು ಅವುಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಗೇರು ಕೃಷಿಕರೊಂದಿಗೆ ಸಂವಾದ ನಡೆಯಿತು.150 ಮಂದಿ ಗ್ರಾಮ ಅರಣ್ಯ ಸಮಿತಿ ಸದಸ್ಯರು, ಕೃಷಿಕರಿಗೆ ಕಸಿ ಗೇರು ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next