ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮಾತ್ರ ಈಶ ಅಂದ ಹಾಗೆ ನಾನು ಹೇಳಲು ಹೊರಟಿರುವುದು ಪ್ರಕೃತಿಯಿಂದಲೇ ನಿರ್ಮಿತವಾಗಿರುವ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಾಲಯದ ಬಗ್ಗೆ.
ಹೌದು ಇದು ಇರುವ ಪ್ರದೇಶ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬ ಪ್ರದೇಶದಲ್ಲಿದೆ . ಎತ್ತ ನೋಡಿದರು ಕಾನನದ ಸೊಬಗಿನ ನಡುವೆ ಡಾಂಬರು ಮಾಸಿರುವ ರಸ್ತೆ ಜನರ ಸಂಚಾರವಿಲ್ಲದ ಕೇವಲ ಬೆರಳೆಣಿಕೆಯಷ್ಟು ಮನೆಗಳು ಇರುವಂಥಹ ಕುಗ್ರಾಮದ ನಡುವೆ ವಿರಾಜಮಾನನಾಗಿರುವ ಲಯಕರ್ತ ಕೇಶವನಾಥೇಶ್ವರ.
ಮೂಡಗಲ್ಲು ಹೆಸರು ಹೇಳುವಂತೆ ಪ್ರಾಕೃತಿಕವಾಗಿ ನಿರ್ಮಾಣಗೊಂಡಿರುವ ಗುಹೆಯೊಳಗೆ ಪೂಜಿಸಲ್ಪಡುವ ಕೇಶವನಾಥೇಶ್ವರನ ದರ್ಶನ ಪಡೆಯುವುದೇ ಒಂದು ವಿಸ್ಮಯ. ಗುಹೆಯೊಳಗೆ ಸುಮಾರು 50 ಆಡಿಗಳಷ್ಟು ವಿಶಾಲ ಜಾಗದಲ್ಲಿ ಹರಡಿರುವ ನೀರು, ಆ ನೀರಿನಲ್ಲಿ ಹಲವು ಬಗೆಯ ಮೀನುಗಳು ಜೊತೆಗೆ ಹಾವುಗಳು ಆತ್ತಿಂದಿತ್ತ ಇತ್ತಿಂದ್ದತ್ತ ಸಂಚರಿಸುತ್ತಿದ್ದರೆ ಯಾವುದೇ ಭಯವಿಲ್ಲದೆ ಹಲವಾರು ವರುಷಗಳಿಂದ ನೀರಿನಲ್ಲಿ ಸಾಗಿ ದೇವರಿಗೆ ಪೂಜೆ ಸಲ್ಲಿಸುವ ಅರ್ಚಕರು. ಒಂದೊಮ್ಮೆ ನೋಡಿದಾಗ ಭಯ ಹುಟ್ಟಿಸುವ ವಾತಾವರಣ. ವಿಶೇಷವೇನೆಂದರೆ ಆರ್ಚಕರು ಹೇಳುವ ಪ್ರಕಾರ ಈ ಉರಗಗಳು ಯಾರಿಗೂ ಯಾವುದೇ ರೀತಿಯ ತೊಂದರೆಗಳನ್ನು ನೀಡಿಲ್ಲ ಎಂದು ಹೇಳಿದ ನಂತರ ಧೈರ್ಯದಿಂದ ನೀರಿಗಿಳಿದು ಸಾಗುವ ಪ್ರಯತ್ನ ಮಾಡಿದೆವು . ಕತ್ತಲು ತುಂಬಿದ ಗುಹೆಯೊಳಗೆ ಕೇವಲ ದೇವರ ದೀಪದ ಬೆಳಕು ಬಿಟ್ಟರೆ ಬೇರೆ ಬೆಳಕಿನ ವ್ಯವಸ್ಥೆ ಇಲ್ಲ. ನೀರಿನಲ್ಲಿ ನಿಂತುಕೊಂಡು ದೇವರ ದರುಶನ ಪಡೆಯುವುದರ ಜೊತೆಗೆ ಕಾಲಿಗೆ ಮುತ್ತಿಕ್ಕುವ ಮೀನುಗಳ ಆನುಭವ ಆದ್ಭುತ.
ಗುಹೆಗೆ ಸಮಾನಾಂತರವಾಗಿ ಅಶ್ವಥಕಟ್ಟೆಯಿದ್ದು ರಾತ್ರಿ ವೇಳೆ ಅಶ್ವಥಕಟ್ಟೆಗೂ ಗುಹೆಗೆ ನೇರಾ ಬೆಳಕಿನ ರೇಖೆಗಳು ಹಾದುಹೋಗುವುದನ್ನು ಕಂಡಿದ್ದೇನೆ ಎಂದು ದೇವಳದ ಅರ್ಚಕರು ಹೇಳುತ್ತಾರೆ.
ಕ್ಷೇತ್ರದ ಇತಿಹಾಸ:
ಈ ಗುಹಾಂತರ ದೇವಾಲಯವು ಆತ್ಯಂತ ಪ್ರಾಚೀನವಾದ ದೇವಾಲಯವಾಗಿದ್ದು ಶಿವನು ಈ ಗುಹೆಯೊಳಗಿಂದ ಕಾಶಿ ತಲುಪಿದ್ದಾನೆ ಎಂಬ ಪ್ರತೀತಿ ಇದೆ. ಅಂತೆಯೇ ಇಲ್ಲಿ ಹಲವಾರು ಋಷಿ ಮುನಿಗಳು ತಪಸ್ಸನ್ನಾಚರಿಸಿದ ನಿದರ್ಶನಗಳು ಇವೆ ಎಂದು ಹೇಳಲಾಗಿದೆ. ಬ್ರಿಟಿಷ್ ಅಧಿಕಾರಿಯಾದ ಕರ್ನಲ್ ಲಾರ್ಡ್ ಮೆಕ್ಕಿಂಗ್ ಹಲವು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರಂತೆ.
ಗತಪೂವ ಕಾಲದಲ್ಲಿ ಓರ್ವ ಭೂಮಾಲಿಕರ ಗದ್ದೆಗೆ ನಿಗೂಢ ಪ್ರಾಣಿಯಿಂದ ಹಾನಿಯಾಗುತ್ತಿತ್ತು ಆ ಪ್ರಾಣಿಯನ್ನು ಹಿಡಿಯಬೇಕೆಂದು ಭೂಮಾಲಿಕನು ರಾತ್ರಿ ಹೊತ್ತು ಕಾದು ಕುಳಿತ ಸಂದರ್ಭ ಒಂದು ಗೋವು ಗದ್ದೆಗೆ ಬರುವುದನ್ನು ಅರಿತ ಭೂಮಾಲಿಕ ಗೋವನ್ನು ಬೆನ್ನತ್ತಿ ಬರುತ್ತಾನೆ ಆಗ ಗೋವು ಅಲ್ಲಿರುವ ಗುಹೆಯ ಒಳಗೆ ಪ್ರವೇಶಿಸುತ್ತದೆ. ಭೂಮಾಲಿಕನು ಗುಹೆಯ ಒಳಗೆ ಹೊಕ್ಕು ಸಾಕಷ್ಟು ದೂರ ಗೋವನ್ನು ಬೆನ್ನಟ್ಟುತ್ತಾನೆ ಸ್ವಲ್ಪ ದೂರ ಕ್ರಮಿಸಿದಾಗ ಗೋವು ಕಣ್ಮರೆಯಾಗುತ್ತದೆ. ಕತ್ತಲೆ ಗುಹೆಯೊಳಗೆ ಬಂಧಿಯಾಗಿರುವ ಭೂಮಾಲಿಕನು ಅನ್ಯ ಮಾರ್ಗ ಕಾಣದೆ ಭಗವಂತನ ಸ್ಮರಣೆ ಮಾಡುತ್ತಾನೆ ,ಈ ಸಂದರ್ಭ ಗುಹೆಯ ಹೊರ ಭಾಗದಿಂದ ಸಣ್ಣ ಜ್ಯೋತಿಯೊಂದು ಪ್ರಕಾಶಿಸಲು ಆರಂಭಿಸುತ್ತಿದೆ ಅದನ್ನು ಅನುಸರಿಸುತ್ತಾ ಭೂಮಾಲಿಕನು ಗುಹೆಯಿಂದ ಹೊರಬರುತ್ತಾನೆ. ದೇವರ ಚೈತನ್ಯದಿಂದ ಗುಹೆಯಿಂದ ಹೊರಬಂದ ಭೂಮಾಲಿಕನು ವಿಸ್ಮಿತನಾಗಿ ಗೋವು ದಾಳಿಮಾಡಿದ ಗದ್ದೆಯನ್ನು ದೇವರಿಗಾಗಿ ಉಂಬಳಿ ಬಿಟ್ಟಿದ್ದಾನೆ ಎನ್ನುವುದು ಪ್ರತೀತಿ.
ಎಳ್ಳಮಾವಾಸ್ಯೆ ವಿಶೇಷ:
ಎಳ್ಳಮಾವಾಸ್ಯೆ ಇಲ್ಲಿನ ವಿಶೇಷತೆಗಳಲ್ಲಿ ಒಂದು ಕೇಶವನಾಥೇಶ್ವರ ದೇವಾಲಯಕ್ಕೂ ಇಲ್ಲೆ ಪಕ್ಕದಲ್ಲಿರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು ಈ ಕೆರೆಯಲ್ಲಿ ಎಳ್ಳಮವಾಸ್ಯೆ ಸ್ನಾನ ಮಾಡಲು ಸಹಸ್ರಾರು ಮಂದಿ ಭಕ್ತರು ವರ್ಷಂಪ್ರತಿ ಬರುತ್ತಾರೆ. ಪ್ರತೀ ವರ್ಷ ಎಳ್ಳಮವಾಸ್ಯೆ ದಿನದಂದು ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುತ್ತಿರುವುದನ್ನು ಕಾಣಬಹುದಂತೆ.
ಸುತ್ತಲೂ ಕಲ್ಲು ಬಂಡೆಗಳಿಂದ ಕೂಡಿರುವ ಪ್ರದೇಶವಾಗಿರುವ ದೇವಾಲಯದಲ್ಲಿ ನೀರಿನ ಪ್ರಮಾಣ ವರ್ಷವಿಡೀ ಒಂದೇ ಪ್ರಮಾಣದಲ್ಲಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾದರೂ ಬೇಸಗೆ ಸಮಯದಲ್ಲಿ ಒಂದು ಅಡಿಯಷ್ಟು ನೀರು ತುಂಬಿರುವುದು ಇಲ್ಲಿನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ.
ಗುಹೆ ಪ್ರವೇಶಿಸಲು ದೇವಸ್ಥಾನದ ಒಳಪ್ರವೇಶಿಸಿ ಹಿಂದಿನ ಬಾಗಿಲಿನಂದ ಹೊರಬರುವ ಬಾಗಿಲು ತೆರುದುಕೊಂಡಾಗ ಈ ಗುಹಾಂತರ ದೇವಾಲಯದ ದರುಷನವಾಗುತ್ತದೆ. ಅರ್ಚಕರು ಈ ದೇವಾಲಯದ ಇತಿಹಾಸವನ್ನು ಬಿಡಿಬಿಡಿಯಾಗಿ ವಿವರಿಸುತ್ತಾರೆ.
ತಲುಪುವ ದಾರಿ:
– ಕುಂದಾಪುರದಿಂದ ಕೊಲ್ಲೂರು ಮಾರ್ಗವಾಗಿ ಕೆರಾಡಿ ತಲುಪಿ ಅಲ್ಲಿಂದ ಮೂಡಗಲ್ಲಿಗೆ ತೆರಳಬಹುದು.
– ಉಡುಪಿಯಿಂದ ಹಾಲಾಡಿ ಮಾರ್ಗವಾಗಿ ಕೆರಾಡಿ ತಲುಪಿ ಅಲ್ಲಿಂದ ಮೂಡಗಲ್ಲಿಗೆ ತೆರಳಬಹುದು.
*ಸುಧೀರ್.ಎ