ಮೂಡುಬಿದಿರೆ: ಒಂಟಿಕಟ್ಟೆ ಯಲ್ಲಿರುವ ವೀರರಾಣಿ ಅಬ್ಬಕ್ಕ ಸಂಸ್ಕ¢ತಿ ಗ್ರಾಮದಲ್ಲಿ ರವಿವಾರ 21ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಹೊನಲು ಬೆಳಕಿನ ಕಂಬಳ ಪ್ರಾರಂಭವಾಯಿತು.
ಶಾಸಕ, ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹಿರಿತನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಅವರು ವಿವಿಧ ಆರಾಧನಾ ಕ್ಷೇತ್ರಗಳ ಪ್ರಸಾದ, ತೀರ್ಥ ಪ್ರೋಕ್ಷಣೆಗೈದು ಪ್ರಾರ್ಥನೆಗೈದರು.
ಚೌಟರ ಅರಮನೆ ಕುಲದೀಪ ಎಂ. ಅವರು ಕರೆಗೆ ಕಾಯಿ ಒಡೆದು ಶುಭ ಹಾರೈಸುವ ಜತೆಗೆ ಚೌಟರ ಅರಮನೆಯ ಕುವರಿ, ಉಳ್ಳಾಲದ ರಾಣಿ ಅಬ್ಬಕ್ಕರ ಪ್ರತಿಮೆಗೆ ಹಾರಾರ್ಪಣೆಗೈದರು. ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳು ದೀಪ ಬೆಳಗಿಸಿ, ಕೋಟಿ ಚೆನ್ನಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದರು. ಉಮಾನಾಥ ಕೋಟ್ಯಾನ್ ಮಾತನಾಡಿ “ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾ| ಎಂ.ವಿ. ಪ್ರಾಂಜಲ್ ಅವರ ಸಂಸ್ಮರಣಾರ್ಥ ಕಂಬಳದ ಪ್ರವೇಶ ದ್ವಾರ ನಿರ್ಮಾಣವಾಗುತ್ತಿದ್ದು ಅವರಿಗೆ ಹಾಗೂ ಸಾಧಕ ಕೃಷಿಕ ದಿ| ಮಿಜಾರುಗುತ್ತು ಆನಂದ ಆಳ್ವರ ನೆನಪಿಗೆ ಈ ವರ್ಷದ ಕಂಬಳವನ್ನು ಸಮರ್ಪಿಸುವುದಾಗಿ ಘೋಷಿಸಿದರು.
ದ.ಕ. ಸಹಕಾರಿ ಹಾಲು ಒಕ್ಕೂಟದ ಆಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ “ಕಂಬಳ ತುಳುನಾಡ ಅಸ್ಮಿತೆ’ ಎಂದು ಸಾರಿದರು. ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಶುಭ ಕೋರಿದರು.
ಕಂಬಳ ಸಮಿತಿ ಪ್ರ.ಕಾರ್ಯದರ್ಶಿ ಗುಣಪಾಲ ಕಡಂಬ, ಕೋಶಾಧಿಕಾರಿ ಭಾಸ್ಕರ ಎಸ್. ಕೋಟ್ಯಾನ್, ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಸುಧೀರ್ ಹೆಗ್ಡೆ ಕುಂಟಾಡಿ, ಕಂಬಳ ಕೋಣಗಳ ಯಜಮಾನರು, ಕಂಬಳ ಸಮಿತಿ ಪ್ರಮುಖರಾದ ತಿಮ್ಮಯ್ಯ ಶೆಟ್ಟಿ, ಮೇಘನಾಥ ಶೆಟ್ಟಿ, ರಂಜಿತ್ ಪೂಜಾರಿ, ದಯಾನಂದ ಪೈ, ಸುನಿಲ್ ಆಳ್ವ, ಸುರೇಶ್ ಪೂಜಾರಿ,ಮನೋಜ್ ಶೆಣೈ, ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ನಿರ್ಗಮನಾಧ್ಯಕ್ಷ ಪ್ರಸಾದ್ ಕುಮಾರ್ ಮೊದಲಾದವರಿದ್ದರು.