Advertisement

ನಾಡು-ನುಡಿ-ಸಂಸ್ಕೃತಿ ಹಬ್ಬಕ್ಕೆ  ವಿದ್ಯಾಗಿರಿ ಸಜ್ಜು 

10:13 AM Nov 16, 2018 | |

ವಿದ್ಯಾಗಿರಿ (ಮೂಡಬಿದಿರೆ): ಕನ್ನಡ ನಾಡು-ನುಡಿ-ಸಂಸ್ಕೃತಿ ಹಬ್ಬದ ಸಂಭ್ರಮಕ್ಕೆ ಬಸದಿಗಳ ನಾಡು ಮೂಡಬಿದಿರೆ ಸರ್ವ ರೀತಿಯಲ್ಲಿ ಸಜ್ಜಾಗಿದೆ. ನ. 16ರಿಂದ ಮೂರು ದಿನಗಳ ಕಾಲ ಆಳ್ವಾಸ್‌ ಕಾಲೇಜಿನ ವಿದ್ಯಾಗಿರಿ ಆವರಣದಲ್ಲಿ ನಡೆಯಲಿರುವ ಆಳ್ವಾಸ್‌ ನುಡಿಸಿರಿ ಜಾತ್ರೆಯು ರಾಜ್ಯ ಮಾತ್ರವಲ್ಲ ದೇಶಾದ್ಯಂತ ಇರುವ ಸಾಹಿತ್ಯಾಸಕ್ತರನ್ನು ಆಮಂತ್ರಿಸುತ್ತಿದೆ. ಇಡೀ ಮೂಡಬಿದಿರೆ ಪರಿಸರವೇ ನುಡಿಸಿರಿ ಜಾತ್ರೆಗೆ ಸಾಕ್ಷಿಯಾಗಲಿದ್ದು, ಈಗಾಗಲೇ ಈ ಪರಿಸರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. 

Advertisement

ಸಾಹಿತ್ಯ, ಸಂಸ್ಕೃತಿ, ಪರಂಪರೆ, ಕೃಷಿ, ಮತ್ತು ಸಾಂಸ್ಕೃತಿಕ ಕಲಾಭಿವ್ಯಕ್ತಿಯನ್ನು ಸಾರುವ ಈ ಹಬ್ಬವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ರಾಜ್ಯದ ಹಲವೆಡೆಗಳಿಂದ ಸಾಹಿತ್ಯಾಸಕ್ತರು, ಕಲಾ ವಿದರು, ವಿದ್ಯಾರ್ಥಿಗಳು ಸಹಿತಿ ಅನೇಕರು ಆಗಮಿಸಿದ್ದು, ಮೂರು ದಿನಗಳ ಉತ್ಸವಕ್ಕೆ ಸಾಕ್ಷಿಯಾಗಲು ತಯಾರಾಗಿದ್ದಾರೆ. ಈಗಾಗಲೇ ಹಳದಿ ಮತ್ತು ಕೆಂಪು ಬಣ್ಣದ ಕನ್ನಡ ಬಾವುಟಗಳು ಕಾಲೇಜು ವಠಾರದಲ್ಲಿ ಸ್ವಚ್ಛಂದವಾಗಿ ಹಾರಾಡುವ ಮೂಲಕ ನುಡಿಸಿರಿಗೆ ಹುರುಪು ದೊರೆತಂತಾಗಿದೆ.

ಪರಿಕಲ್ಪನೆ
ಪ್ರತಿ ಬಾರಿಯೂ ಹೊಸ ಪರಿಕಲ್ಪನೆಯೊಂದಿಗೆ ಸಾಹಿತ್ಯಾಸಕ್ತರನ್ನು ಎದುರುಗೊಳ್ಳುತ್ತಿರುವ ಡಾ| ಮೋಹನ್‌ ಆಳ್ವ ಅವರು ಈ ಬಾರಿ ನುಡಿಸಿರಿ ವೈಭವಕ್ಕೆ ‘ಕರ್ನಾಟಕ ದರ್ಶನ: ಬಹುರೂಪಿ ಆಯಾಮಗಳು’ ಎಂಬ ಪರಿಕಲ್ಪನೆಯನ್ನು ನೀಡಿದ್ದಾರೆ. ಒಟ್ಟು ನಾಲ್ಕು ಗೋಷ್ಠಿಗಳು, ಎಂಟು ವಿಶೇಷ ಉಪನ್ಯಾಸಗಳು ಜತೆಗೆ ಕವಿ ಸಮಯ-ಕವಿನಮನ ಕಾರ್ಯಕ್ರಮ, ಶ್ರೇಷ್ಠರ ಸಂಸ್ಮರಣೆ, ದ್ವಿಶತಮಾನದ ನಮನ, ನನ್ನ ಕತೆ ನಿಮ್ಮ ಜತೆ ಮುಂತಾದ ಕಾರ್ಯಕ್ರಮಗಳು ನುಡಿಸಿರಿ ವೈಭವಕ್ಕೆ ಮೆರುಗು ನೀಡಲಿವೆ.

ಎರಡು ಕಡೆ ಭೋಜನ
ಆಳ್ವಾಸ್‌ ನುಡಿಸಿರಿಯಲ್ಲಿ ಈ ಬಾರಿ ಊಟೋಪಚಾರಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸುವುದಕ್ಕೆ ಮತ್ತು ಆಗಮಿಸಿದ ಅತಿಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು 2ಕಡೆ ಭೋಜನ ತಯಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ದಿನ ಲಕ್ಷಕ್ಕೂ ಅಧಿಕ ಮಂದಿ ಭೋಜನ ಸವಿಯಲಿದ್ದಾರೆ. ಸುಮಾರು 100 ಕಡೆಗಳಲ್ಲಿ ಭೋಜನ ಕೌಂಟರ್‌ ಇರಲಿದೆ. 

ಏಳು ವೇದಿಕೆ-
ಏಳು ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ಮತ್ತು ಗೋಷ್ಠಿಗಳು ನಡೆಯಲಿವೆ. ರತ್ನಾಕರವರ್ಣಿ ವೇದಿಕೆ-ಸಂತ ಶಿಶುನಾಳ ಶರೀಫ ಸಭಾಂಗಣ, ಕು.ಶಿ. ಹರಿದಾಸ ಭಟ್ಟ ವೇದಿಕೆ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ವೇದಿಕೆಗಳಲ್ಲಿ ಮುಸ್ಸಂಜೆಯಿಂದ ತಡರಾತ್ರಿಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಡಾ| ವಿ.ಎಸ್‌. ಆಚಾರ್ಯ ಸಭಾಭವನದ ಮಿಜಾರುಗುತ್ತು ಭಗವಾನ್‌ ಶೆಟ್ಟಿ ವೇದಿಕೆ, ಕೆ.ವಿ. ಸುಬ್ಬಣ್ಣ ಬಯಲುರಂಗ ಮಂದಿರ ಹಾಗೂ ಕೆ.ಎಸ್‌. ಪುಟ್ಟಣ್ಣಯ ಕೃಷಿ ಆವರಣದ ಆನಂದ ಬೋಳಾರ್‌ ವೇದಿಕೆಗಳಲ್ಲಿ ಹಗಲು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

Advertisement

ಕೃಷಿ ಸಿರಿಯಲ್ಲಿ ಈ ಬಾರಿ
ಈ ವರ್ಷದ ಕೃಷಿ ಸಿರಿ ವಿಭಿನ್ನವಾಗಿರಲಿದೆ. ಪುಷ್ಪ ಪ್ರದರ್ಶನದೊಂದಿಗೆ ಮತ್ಸ್ಯ ಮತ್ತು ಸಮುದ್ರ ಚಿಪ್ಪು ಪ್ರದರ್ಶನ, ನ್ಯೂಜಿಲ್ಯಾಂಡ್‌ ಮೂಲದ ಆಹಾರಕ್ಕಾಗಿ ಬಳಸುವ ಬಣ್ಣದ ಸಸ್ಯಗಳ ಪ್ರದರ್ಶನ, ತರಕಾರಿ-ಹಣ್ಣುಗಳಲ್ಲಿ ಕಲಾಕೃತಿ ಪ್ರದರ್ಶನ, 44 ತಳಿ ಬಿದಿರು ಗಿಡ, 40 ತಳಿ ಬಿದಿರು ಪ್ರದರ್ಶನ, ಕೃಷಿ ಸಂಬಂಧಿ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, 3 ಎಕ್ರೆ ಪ್ರದೇಶದಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ನೈಜ ಕೃಷಿ ದರ್ಶನ, 250ಕ್ಕೂ ಹೆಚ್ಚು ರಾಜ್ಯದ ಕೃಷಿ ಮಳಿಗೆಗಳು ಕೃಷಿಸಿರಿಯ ಹೈಲೈಟ್ಸ್‌.

ನುಡಿಸಿರಿಯಲ್ಲಿ ಕಲಾಸಿರಿ ವೈಭವ  
ಆಳ್ವಾಸ್‌ ಸಾಹಿತ್ಯ ಸಮ್ಮೇಳನವು ಸಾಹಿತ್ಯ ದುಂದುಭಿಯನ್ನು ಮೊಳಗಿಸಿದರೆ, ಇನ್ನೊಂದೆಡೆ ಕಲಾಸಿರಿಗಳು ನುಡಿಸಿರಿಗೆ ಕಳೆಗಟ್ಟಲು ತಯಾರಾಗಿವೆ. ರಾಜ್ಯದ 25 ಮಂದಿ ಚಿತ್ರ ಕಲಾವಿದರಿಂದ ಆಳ್ವಾಸ್‌ ಚಿತ್ರಸಿರಿ ವರ್ಣಚಿತ್ರ ಕಲಾಮೇಳ ಹಾಗೂ ಪ್ರದರ್ಶನವನ್ನು ಆಯೋಜಿಸಲಾಗಿದೆ. 25 ಮಂದಿ ವ್ಯಂಗ್ಯ ಚಿತ್ರ ಕಲಾವಿದರಿಂದ ವ್ಯಂಗ್ಯಚಿತ್ರ ರಚನೆ-ಪ್ರದರ್ಶನ, ವಿಜ್ಞಾನ ಮಾದರಿಗಳ ಪ್ರಾತ್ಯಕ್ಷಿಕೆ, ಪ್ರದರ್ಶನದ ವಿಜ್ಞಾನ ಸಿರಿ, ಛಾಯಾಚಿತ್ರ ಸಿರಿಯಂತಹ ವಿವಿಧ ಕಾರ್ಯಕ್ರಮಗಳೂ ಆಳ್ವಾಸ್‌ ನುಡಿಸಿರಿಯ ಗೌಜಿಯನ್ನು ಹೆಚ್ಚಿಸಲಿವೆ. ಇದರೊಂದಿಗೆ ಈ ಬಾರಿ ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಆಳ್ವಾಸ್‌ ಚಲನಚಿತ್ರ ಸಿರಿಯನ್ನೂ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next