Advertisement

BJP: ಮಿಜೋಯೇತರ ಮತದಾರರತ್ತ ಚಿತ್ತ

12:28 AM Oct 28, 2023 | Team Udayavani |

ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಪಕ್ಷದ ಬಲವರ್ಧನೆಗೆ ಬಿಜೆಪಿ ಪಣತೊಟ್ಟಿದೆ. ಹಾಲಿ ವಿಧಾನಸಭೆಯಲ್ಲಿ ಬಿಜೆಪಿ ಕೇವಲ ಒಬ್ಬ ಶಾಸಕನನ್ನು ಹೊಂದಿದೆ. 2018ರಲ್ಲಿ ಆಯ್ಕೆಯಾಗಿರುವ ಬಿ.ಡಿ.ಚಕ್ಮಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿದ್ದ 39 ಬಿಜೆಪಿ ಅಭ್ಯರ್ಥಿಗಳ ಪೈಕಿ ಕೆಲವರು ದ್ವಿತೀಯ, ತೃತೀಯ, 4ನೇ ಸ್ಥಾನಕ್ಕೆ ಇಳಿದಿದ್ದರು. ಹೀಗಾಗಿ ಈ ಬಾರಿ 23 ಮಂದಿಯನ್ನು ಮಾತ್ರ ಕಣಕ್ಕಿಳಿಸಿದೆ.

Advertisement

ಪ್ರಸಕ್ತ ಚುನಾವಣೆಯಲ್ಲಿ ಶಕ್ತಿ ವರ್ಧಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಪ್ರಯತ್ನ ನಡೆದಿದ್ದು, ನಾಗಾಲ್ಯಾಂಡ್‌ನ‌ ಡಿಸಿಎಂ ವೈ.ಪಟ್ಟೋನ್‌ ಅವರು ಮಾಮಿತ್‌, ದಂಪಾ ಮತ್ತು ಹಚ್ಚೆಕ್‌ ಎಂಬ 3 ಜಿಲ್ಲೆಗಳಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು 30ರಂದು ಮಾಮಿತ್‌ನಲ್ಲಿ ಬೃಹತ್‌ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ರಾಜಧಾನಿ ಐಜ್ವಾಲ್‌, ಲುಂಗ್ಲೆಲಿ ಎಂಬ ದೊಡ್ಡ ನಗರಗಳನ್ನು ಬಿಟ್ಟು ಸಣ್ಣ ನಗರಗಳಲ್ಲಿ ಮೋದಿ ಪ್ರಚಾರ ನಡೆಸಲಿದ್ದಾರೆ.

ಅಂದ ಹಾಗೆ ಈಶಾನ್ಯದ ಪುಟ್ಟ ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಶೇ.87ರಷ್ಟು ಮಂದಿ ಕ್ರಿಶ್ಚಿಯನ್ನರೇ ಇದ್ದಾರೆ. ಮಣಿಪುರ ಗಲಭೆಯ ಬಳಿಕ ಮಿಜೋ ಕ್ರಿಶ್ಚಿಯನ್ನರು ಬಿಜೆಪಿಯಿಂದ ದೂರ ಸರಿದಿದ್ದಾರೆ. ಇತ್ತೀಚೆಗಷ್ಟೇ ಮಿಜೋರಾಂ ಸಿಎಂ ಝೊರಾಮ್‌ತಂಗಾ ಅವರು, “ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ’ ಎಂದು ಹೇಳಿರುವುದರ ಹಿಂದೆ ಮಿಜೋ ಕ್ರಿಶ್ಚಿಯನ್ನರ ಕೆಂಗಣ್ಣಿಗೆ ತುತ್ತಾಗುವುದರಿಂದ ತಪ್ಪಿಸಿಕೊಳ್ಳುವ ಪ್ಲ್ರಾನ್‌ ಅಡಗಿತ್ತು ಎನ್ನುವುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಬ್ರೂ, ಚಕ್ಮಾ ಮುಂತಾದ ಮಿಜೋಯೇತರ ಸಮುದಾಯಗಳ ಮತಗಳನ್ನು ನೆಚ್ಚಿಕೊಂಡಿದೆ. ಈಗಾಗಲೇ ಈ ಸಮುದಾಯಗಳಿಗೆ ಕೇಂದ್ರ ಸರಕಾರವು ಹಲವು ಸೌಲಭ್ಯಗಳನ್ನು ಒದಗಿಸಿದ್ದು, ಅವುಗಳನ್ನು ಮತಗಳನ್ನಾಗಿ ಪರಿವರ್ತಿಸಲು ಸತತ ಪ್ರಯತ್ನ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next