ವಾಡಿ: ಮನುಜಮತ ವಿಶ್ವಪಥದ ಮಾರ್ಗ ತೋರಿಸುವ ಅರಿವಿನ ಪ್ರಜ್ಞೆಯೇ ಕುವೆಂಪು ಸಾಹಿತ್ಯ ಎಂದು ಉಪನ್ಯಾಸಕ ನಿಜಲಿಂಗ ದೊಡ್ಡಮನಿ ಹೇಳಿದರು.
ಕುವೆಂಪು ಜನ್ಮದಿನದ ಪ್ರಯುಕ್ತ ಸಂಚಲನ ಸಾಹಿತ್ಯ-ಸಾಂಸ್ಕೃತಿಕ ವೇದಿಕೆ ವತಿಯಿಂದ ಗುರುವಾರ ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಎದೆಯ ದನಿ ನಂಬಿದ ಉದಯ ರವಿ ಶೀರ್ಷಿಕೆ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಅವರು ಮಾತನಾಡಿದರು.
ಧಾರ್ಮಿಕ ಕಟ್ಟಳೆಗಳನ್ನು ಮೀರಿ ಹೊರ ಬನ್ನಿ ಎಂದು ಕರೆ ನೀಡಿರುವ ಕವಿ ಕುವೆಂಪು, ಬರೆದಂತೆ ಬದುಕಿ ತೋರಿಸಿದ್ದಾರೆ. ಅವರ ಸಾಹಿತ್ಯ ಓದಲು ನಮಗೂ ಅಷ್ಟೇ ಧೈರ್ಯ ಬೇಕಾಗುತ್ತದೆ. ಜತೆಗೆ ನಮ್ಮಲ್ಲಿ ಆ ನೈತಿಕತೆಯೂ ಇರಬೇಕಾಗುತ್ತದೆ. ಕುವೆಂಪು ಅವರನ್ನು ಕೆಣಕಿದರೆ ವೈಯಕ್ತಿಕ ಬದುಕು ವೈಚಾರಿಕವಾಗಿ ತೆರೆದುಕೊಳ್ಳುವುದಲ್ಲದೇ ಸಮಾಜಕ್ಕೆ ಬೆಳಕು ದೊರೆಯುತ್ತದೆ ಎಂದರು.
ಸಂಚಲನ ಸಾಹಿತ್ಯ ವೇದಿಕೆ ಕಾರ್ಯದರ್ಶಿ ದಯಾನಂದ ಖಜೂರಿ ಮಾತನಾಡಿ, ಸಮಾಜವನ್ನು ಬದಲಿಸುವ ಶಕ್ತಿ ಹೊಂದಿರುವ ವಿದ್ಯಾರ್ಥಿ ಯುವಜನರು ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಪ್ರಗತಿಪರ ಚಳವಳಿಗಳ ಭಾಗವಾಗಬೇಕು. ಎಂದರು.
ಪುರಸಭೆ ಸದಸ್ಯೆ ಸುಗಂಧಾ ನಾಗೇಂದ್ರ ಜೈಗಂಗಾ ಅವರು ಕುವೆಂಪು ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಶೀನಾಥ ಹಿಂದಿನಕೇರಿ ಅಧ್ಯಕ್ಷತೆ ವಹಿಸಿದ್ದರು. ನಿವೇದಿತಾ ದಹಿಹಂಡೆ, ವಿಕ್ರಮ ನಿಂಬರ್ಗಾ, ಮಡಿವಾಳಪ್ಪ ಹೇರೂರ, ದೇವಿಂದ್ರ ಕರದಳ್ಳಿ, ರವಿ ಕೋಳಕೂರ, ಮಲ್ಲೇಶ ನಾಟೇಕರ, ಚಂದ್ರು ಕರಣಿಕ, ವೀರಣ್ಣ ಯಾರಿ, ಯಶ್ವಂತ ಧನ್ನೇಕರ, ಜಯದೇವ ಜೋಗಿಕಲ್‌ವುಠ, ಬಸವರಾಜ ಕೇಶ್ವಾರ, ಪ್ರಕಾಶ ಚಂದನಕೇರಾ, ಮಹಾಂತೇಶ ಬಿರಾದಾರ, ಭೀಮರಾವ ದೊರೆ, ಮಲ್ಲಯ್ಯಸ್ವಾಮಿ ಮಠಪತಿ, ಬಾಬುಮಿಯ್ನಾ ಪಾಲ್ಗೊಂಡಿದ್ದರು. ಶೋಭಾ ನಿಂಬರ್ಗಾ ಸಂಗಡಿಗರು ಕುವೆಂಪು ಗೀತೆ ಪ್ರಸ್ತುತಪಡಿಸಿದರು. ಖೇಮಲಿಂಗ ಬೆಳಮಗಿ ಸ್ವಾಗತಿಸಿದರು, ಸಿದ್ಧಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು, ರಾಯಪ್ಪ ಕೊಟಗಾರ ವಂದಿಸಿದರು.