ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂದಿನ ಅಧಿವೇಶನದಲ್ಲಿ ಮೌಡ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಧರಣಿಯನ್ನು ಪ್ರಗತಿಪರರು ಹಾಗೂ ಮಠಾಧೀಶರ ವೇದಿಕೆ ಅಂತ್ಯಗೊಳಿಸಿವೆ.
ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರಿಂದ ಅಹವಾಲು ಹಾಗೂ ಬೇಡಿಕೆಗಳ ಪ್ರಸ್ತಾವನೆಯನ್ನು ಸ್ವೀಕರಿಸಿದ ಜಯ ಚಂದ್ರ, ಮುಖ್ಯಮಂತ್ರಿಗಳ ಜೊತೆ ಹೋರಾಟಗಾರರ ಬೇಡಿಕೆ ಬಗ್ಗೆ ಸಮಾಲೋಚನೆ ನಡೆಸಿ ಮತ್ತೆ ಮರಳಿ ಪ್ರತಿಭಟನಾ ಸ್ಥಳಕ್ಕೆ ಬಂದು ಮುಂದಿನ ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಲಾಗಿದ್ದು ಮುಂದಿನ ಸಚಿವ ಸಂಪುಟದಲ್ಲಿ ವಿಶೇಷ ಅಧಿವೇಶನ ಕರೆಯುವ ಹಾಗೂ ಕಾಯ್ದೆ ಜಾರಿಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮಾತಿಗೆ ತಪ್ಪುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಡುಮಾಮಿಡಿ ಚನ್ನಮಲ್ಲ ಸ್ವಾಮೀಜಿ, ಕಳೆದ ಮೂರೂವರೆ ವರ್ಷಗಳಿಂದ ಮೌಡ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಈವರೆಗೆ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮುಂದಾಗಿಲ್ಲ. ನಾವು ವಿಶ್ವಾಸ ಇಟ್ಟಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದಲ್ಲೇ ಏಕೆ ಕಾಯ್ದೆ ಜಾರಿಗೊಳಿಸಲು ವಿಳಂಬವಾಗುತ್ತಿದೆ? ನಿಮ್ಮ ಕೈಯನ್ನು ಯಾರು ಕಟ್ಟಿದ್ದಾರೆ? ಎಂದು ಪ್ರಶ್ನಿಸಿದರು.
ಸರ್ಕಾರ ಕಾಯ್ದೆ ಜಾರಿಗೆ ತರದಿದ್ದರೆ ನಾವೇ ಸರ್ಕಾರದ ವಿರುದ್ಧ ಹೋರಾಡಬೇಕಾಗುತ್ತದೆ. ನಿಮ್ಮ ಸರ್ಕಾರ ಹೋದರೂ ಪರವಾಗಿಲ್ಲ. ಒಳ್ಳೆಯ ಕೆಲಸದಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಆದರೆ, ಕೆಲ ಪುಂಡ ಜ್ಯೋತಿಷಿಗಳು ಮಾಡುವ ಹೆದರಿಕೆಗೆ ಅಂಜಬೇಡಿ, ಕಾಯ್ದೆ ಜಾರಿಗಾಗಿ ಪ್ರಗತಿಪರ ಮಠಾಧೀಶರ ವೇದಿಕೆ ನೂರಾರು ಶರಣರು, ಸಂತರು ಶ್ರಮಿಸಿದ್ದಾರೆ. ಹೀಗಾಗಿ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಶಾಸಕ ಪುಟ್ಟಣ್ಣಯ್ಯ, ಮಾಜಿ ಶಾಸಕ ಶ್ರೀರಾಮರೆಡ್ಡಿ, ಹೋರಾಟಗಾರ ಅನಂತ್‌ಸುಬ್ಬರಾವ್, ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ ಸೇರಿದಂತೆ ಪ್ರಮುಖರು ಹಾಜರಿದ್ದರು.
ಜಲ್ಲಿಕಟ್ಟು, ಕಂಬಳಕ್ಕೆ ಮಾತ್ರ ನೀವೆಲ್ಲ ಒಂದು
ರಾಜ್ಯದಲ್ಲಿ ಜಲ್ಲಿಕಟ್ಟು, ಕಂಬಳದಂತಹ ವಿಷಯಗಳು ಬಂದಾಗ ಮಾತ್ರ ಎಲ್ಲ ಪಕ್ಷಗಳೂ ಒಂದಾಗಿ ಸುಗ್ರೀವಾಜ್ಞೆ ತರುತ್ತೀರಾ. ಆದರೆ, ಬಡವರು, ಮುಗರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಕಾಯ್ದೆ ಜಾರಿಗೊಳಿಸುವಂತೆ ಪ್ರತಿಭಟನೆ ನಡೆಸಿದರೂ, ಕಾಯ್ದೆ ಜಾರಿಗೊಳಿಸಲು ಯಾಕೆ ಹಿಂಜರಿಯುತ್ತಿದ್ದೀರಿ ಎಂದು ಮಂತ್ರಿಗಳನ್ನು ಚನ್ನಮಲ್ಲ ಸ್ವಾಮೀಜಿ ತರಾಟೆಗೆ ತೆಗೆದುಕೊಂಡರು.