ನರಗುಂದ: ಕೋವಿಡ್ ಹಿನ್ನೆಲೆಯಲ್ಲಿ ಇದುವರೆಗೆ ವೃದ್ಧರಿಗೆ ಮಾಸಾಶನ ಸಂದಾಯ ಆಗಿರಲಿಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಗದಗ ಜಿಲ್ಲೆಯ 581 ವೃದ್ಧರಿಗೆ ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಮಾಸಾಶನ ಅವರ ಮನೆ ಬಾಗಿಲಿಗೆ ಬಟವಡೆ ಮಾಡಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾಸಾಶನ ಬಾರದೇ ಅಂತಹ ವೃದ್ಧರು ತೊಂದರೆ ಎದುರಿಸುತ್ತಿರುವ ಬಗ್ಗೆ ನೇರವಾಗಿ ನನ್ನ ಗಮನಕ್ಕೆ ಬಂದಿದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿ ಮನವರಿಕೆ ಮಾಡಿದ್ದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯ 581 ಜನ ಫಲಾನುಭವಿಗಳಿಗೆ ಮಾಸಾಶನ ಬಿಡುಗಡೆ ಮಾಡಿದ್ದು, ಎಲ್ಲ ತಹಶೀಲ್ದಾರ್‌ಗೆ ಮನೆ ಮನೆಗೆ ಬಟಡವೆ ಮಾಡುವಂತೆ ಸೂಚನೆ ನೀಡಿದ್ದಾರೆ. ನರಗುಂದ ತಾಲೂಕಿನಲ್ಲಿ 60 ಜನರಿಗೆ ಮಾಸಾಶನ ಬಿಡುಗಡೆ ಆಗಿದೆ ಎಂದು ಸಚಿವ ಸಿ.ಸಿ. ಪಾಟೀಲ ತಿಳಿಸಿದರು.
1 ಸಾವಿರ ಕಿಟ್: ಮತಕ್ಷೇತ್ರದ ಹೊಳೆಆಲೂರ, ಲಕ್ಕುಂಡಿ ಗ್ರಾಮಗಳಲ್ಲಿ ಹೊಸದಾಗಿ ಕೋವಿಡ್ ಪ್ರಕರಣ ದೃಢಪಟ್ಟಿವೆ. ಈ ಹಿಂದೆ ಬೆಂಗಳೂರಿನಲ್ಲಿ ಹಟ್ಟಿ ಚಿನ್ನದ ಗಣಿ ನಿಗಮ ಅಧಿಕಾರಿಗಳ ಸಭೆಯಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಕಿಟ್ ಬಗ್ಗೆ ನಿಗಮದ ಎಂಡಿ ಸಲ್ಮಾ, ಪ್ರಧಾನ ಕಾರ್ಯದರ್ಶಿ ಮಹೇಶ್ವರರಾವ್ ಅವರಿಗೆ ಮನವಿ ಮಾಡಿದ್ದೆ. ಹಟ್ಟಿ ಚಿನ್ನದ ಗಣಿ ನಿಗಮದಿಂದ 1 ಸಾವಿರ ಕಿಟ್‌ಗಳನ್ನು ಗದಗ ಜಿಲ್ಲಾಧಿಕಾರಿಗೆ ಪೂರೈಸಿದ್ದು, ಹೊಳೆಆಲೂರ, ಲಕ್ಕುಂಡಿ ಕಂಟೇನ್ಮೆಂಟ್ ಪ್ರದೇಶದ ಜನರಿಗೆ ಮನೆಗೊಂದು ವಿತರಣೆ ಮಾಡಲಾಗುತ್ತಿದೆ. ಉಳಿದ ಕಿಟ್ ತುರ್ತು ಪರಿಸ್ಥಿತಿಗೆ ಕಾಯ್ದಿರಿಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ತಹಶೀಲ್ದಾರ್ ಎ.ಎಚ್. ಮಹೇಂದ್ರ, ತಾಪಂ ಇಒ ಚಂದ್ರಶೇಖರ ಕುರ್ತಕೋಟಿ, ಗುರಪ್ಪ ಆದೆಪ್ಪನವರ, ಸಿದ್ದೇಶ ಹೂಗಾರ ಮುಂತಾದವರಿದ್ದರು.
ಕೋವಿಡ್ ವೈರಸ್‌ನಿಂದ ಲಾಕ್‌ಡೌನ್ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಆಹಾರ ಧಾನ್ಯಗಳ 100 ಕಿಟ್‌ಗಳನ್ನು ಪೂರೈಸಿದ್ದು, ಬಡ ಹಾಗೂ ಹಿಂದುಳಿದ ವರ್ಗಗಳ ಕುಟುಂಬಕ್ಕೆ ಅವುಗಳನ್ನು ವಿತರಿಸಲಾಗುವುದು. –
ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ